ಯಲ್ಲಾಪುರ:
ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಪ.ಪಂ. ಕಾರ್ಯಾಲಯದಲ್ಲಿ ನೆಡೆದ ಚುನಾವಣೆಯಲ್ಲಿ ಪ.ಪಂ. ಅಧ್ಯಕ್ಷರಾಗಿ ಸುನಂದಾ ದಾಸ್ ಹಾಗೂ ಉಪಾಧ್ಯಕ್ಷರಾಗಿ ಶಾಮಲಿ ಪಾಟಣಕರ್ ಬಹಮತದಿಂದ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಬಿಜೆಪಿಯಿಂದ ಸುನಂದಾದಾಸ್ ಹಾಗೂ ಶಾಮಲಿ ಪಾಟಣಕರ್ ಕಾಂಗ್ರೆಸ್ನಿಂದ ಸೈಯ್ಯದ್ ಕೈಸರ್ ಹಾಗೂ ನರ್ಮದಾ ನಾಯ್ಕ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಅಭ್ಯರ್ಥಿಗಳಿಗೆ ಸಚಿವ ಶಿವರಾಮ ಹೆಬ್ಬಾರ ಅವರ ಮತವು ಸೇರಿ 15 ಮತಗಳು ಬಿತ್ತು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದವರಿಗೆ ತಲಾ 2 ಮತಗಳು ಬಿತ್ತು. ಪಕ್ಷೇತರ ಸದಸ್ಯ ರಾಧಾಕೃಷ್ಣ ನಾಯ್ಕ ತಟಸ್ಥರಾಗಿದ್ದು, ಕಾಂಗ್ರೆಸ್ನ ಇಬ್ಬರು ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ತಹಶಿಲ್ದಾರ ಗಣಪತಿ ಶಾಸ್ತ್ರಿ ಕಾರ್ಯನಿರ್ವಹಿಸಿದರು.
ಅಧ್ಯಕ್ಷೆ ಸುನಂದಾ ದಾಸ್ ಕಾಂಗ್ರೆಸ್ನಿಂದ ಆಯ್ಕೆಯಾಗಿ ನಂತರ ರಾಜಕೀಯ ಬೆಳವಣಿಗೆಯಲ್ಲಿ ಹೆಬ್ಬಾರ ಬಿಜೆಪಿ ಸೇರಿದ ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಈ ಹಿಂದೆ ಕೂಡಾ ಸದಸ್ಯರಾಗಿ, ಸ್ಥಾಯಿಸಮಿತಿ ಅಧ್ಯಕ್ಷರಾಗಿ ಅನುಭವ ಹೊಂದಿದ್ದಾರೆ. ಉಪಾಧ್ಯಕ್ಷೆ ಶಾಮಲಿ ಪಾಟಣಕರ್ ಬಿಜೆಪಿ ಪಕ್ಷದಲ್ಲಿ ಈ ಹಿಂದೆ ತಾಲೂಕು ಹಾಗೂ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇಬ್ಬರು ಮಹಿಳೆಯರೇ ಅಧಿಕಾರ ಹಿಡಿದಿದ್ದು, ಪುರುಷ ಸದಸ್ಯರು ತಣ್ಣನೆಯ ಅಸಮಧಾನ ಹೊಂದುವಂತಾಗಿದೆ. ಅಧ್ಯಕ್ಷ-ಉಪಾಧ್ಯಕ್ಷ ಸಾಮಾನ್ಯ ಮೀಸಲಾತಿ ಬಂದಾಗ ಓರ್ವ ಪುರುಷ ಇನ್ನೋರ್ವ ಮಹಿಳೆಗೆ ಅಧಿಕಾರ ಹಂಚಿಕೆ ಮಾಡಬಹುದಿತ್ತು. ಆದರೆ ಎರಡೂ ಅಧಿಕಾರ ಮಹಿಳೆಯರಿಗೇ ನೀಡಲಾಗಿದೆ. ಇದರಿಂದ ಪುರುಷ ಸದಸ್ಯರು ಅಧಿಕಾರದಿಂದ ವಂಚಿತರಾಗಿರುವುದು ವಿಶೇಷವಾಗಿದೆ. ನಂತರ ಸಚಿವ ಶಿವರಾಮ ಹೆಬ್ಬಾರ ಹಾಗೂ ಪಕ್ಷದ ಪ್ರಮುಖರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಭಿನಂದಿಸಿ, ಸಂಭ್ರಮಾಚರಣೆ ನಡೆಸಿದರು.
Leave a Comment