ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, 2021ರ ಜನವರಿ 1 ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದೆ. ಅಲ್ಲದೆ ಕೇಂದ್ರ ಮೋಟಾರು ವಾಹನ ಕಾಯ್ದೆ 1981ರ ತಿದ್ದುಪಡಿಯಂತೆ 2017ರ ಡಿಸೆಂಬರ್ 1ಕ್ಕೆ ಮುನ್ನ ಮಾರಾಟವಾಗಿರುವ ಎಲ್ಲಾ ‘ಎಂ’ ಮತ್ತು ‘ಎನ್’ ವರ್ಗದ ಹಳೆಯ ಮೋಟಾರು ವಾಹನಗಳಿಗೂ(ದ್ವಿಚಕ್ರ ವಾಹನಗಳಿಗೆ) ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ.
ಈ ಕುರಿತಂತೆ ಸಚಿವಾಲಯ 2020ರ ನವೆಂಬರ್ 6ರಂದು ಜಿಎಸ್ಆರ್ 690(ಇ) ಅಧಿಸೂಚನೆಯನ್ನು ಹೊರಡಿಸಿತ್ತು.

ಕೇಂದ್ರೀಯ ಮೋಟಾರು ವಾಹನ ನಿಯಮ 1989ರ ಅನ್ವಯ 2017ರ ಡಿಸೆಂಬರ್ 1 ರ ನಂತರ ನೋಂದಾಯಿಸಲ್ಪಟ್ಟಿರುವ ಎಲ್ಲಾ ಹೊಸ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದ್ದು, ಅವುಗಳನ್ನು ವಾಹನ ಉತ್ಪಾದಕರು ಅಥವಾ ಡೀಲರ್ ಗಳು ಪೂರೈಸಬೇಕಾಗಿದೆ. ಅಲ್ಲದೆ ಸಾರಿಗೆ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯ ನಂತರವೇ ಅವುಗಳ ಕ್ಷಮತಾ ಪ್ರಮಾಣಪತ್ರ(ಫಿಟ್ ನೆಸ್ ಸರ್ಟಿಫಿಕೇಟ್)ಅನ್ನು ನವೀಕರಣ ಮಾಡಿಕೊಡಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಜೊತೆಗೆ 2019ರ ಅಕ್ಟೋಬರ್ 1ರಿಂದೀಚೆಗೆ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಅರ್ಜಿ ನಮೂನೆ ಸಂಖ್ಯೆ 51(ವಿಮಾ ಪ್ರಮಾಣಪತ್ರ)ಕ್ಕೆ ತಿದ್ದುಪಡಿ ತರಲಾಗಿದ್ದು, ಆ ಮೂಲಕ ಹೊಸದಾಗಿ ಮೂರನೇ ವ್ಯಕ್ತಿ ವಿಮೆಯನ್ನು ಪಡೆಯಬೇಕಾದರೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದ್ದು, ಅದರಲ್ಲಿ ಫಾಸ್ಟ್ ಟ್ಯಾಗ್ ವಿವರಗಳನ್ನು ಸೆರೆಹಿಡಿಯಲಾಗುವುದು. ಇದು 2020ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಟೋಲ್ ಪ್ಲಾಜಾಗಳಲ್ಲಿ ಶೇ.100ರಷ್ಟು ಪಾವತಿಯನ್ನು ಖಾತ್ರಿಪಡಿಸಲು ಮತ್ತು ಪ್ಲಾಜಾಗಳ ಮೂಲಕ ವಾಹನಗಳು ಸುಗಮವಾಗಿ ಸಂಚರಿಸಲು ಹಾಗೂ ವಿದ್ಯುನ್ಮಾನ ರೀತಿಯಲ್ಲಿ ಶುಲ್ಕ ಪಾವತಿ ನಿಟ್ಟಿನಲ್ಲಿ ಈ ಅಧಿಸೂಚನೆ ಅತ್ಯಂತ ಮಹತ್ವದ್ದೆಂದು ಹೇಳಲಾಗಿದೆ. ಟೋಲ್ ಪ್ಲಾಜಾಗಳಲ್ಲಿ ಕಾಯುವ ಅಗತ್ಯವಿರುವುದಿಲ್ಲ ಹಾಗೂ ಇದರಿಂದ ಇಂಧನ ಉಳಿತಾಯವಾಗಲಿದೆ.
ಹಲವು ವಿಧಗಳ ಮೂಲಕ ಫಾಸ್ಟ್ ಟ್ಯಾಗ್ ಲಭ್ಯತೆ ಖಾತ್ರಿಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ಅವುಗಳು ಭೌತಿಕವಾಗಿ ಹಲವು ಪ್ರದೇಶಗಳಲ್ಲಿ ಮತ್ತು ಆನ್ ಲೈನ್ ಕಾರ್ಯತಂತ್ರದ ಮೂಲಕವೂ ದೊರಕಲಿವೆ. ಹಾಗಾಗಿ ನಾಗರಿಕರು ತಮ್ಮ ವಾಹನಗಳಿಗೆ ಮುಂದಿನ ಎರಡು ತಿಂಗಳೊಳಗೆ ಸೂಕ್ತ ಸಮಯದಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
Leave a Comment