(ಸಿದ್ದಾಪುರ ಮಾರ್ಗದ ಹುಡುಕಾಟದಲ್ಲಿ ಪದೇ ಪದೇ ಎಡವುತ್ತಿರುವ ವಾಹನ ಚಾಲಕರು )
ಹೊನ್ನಾವರ – ಕುಮಟಾ ಶಿರಸಿ ರಸ್ತೆ ಅಗಲೀಕರಣದ ಹಿನ್ನಲೆಯಲ್ಲಿ ಶಿರಸಿ ಸಿದ್ದಾಪುರಕ್ಕೆ ಹೊಸ ಮಾರ್ಗದ ಹುಡುಕಾಟದಲ್ಲಿರುವ ವಾಹನ ಸವಾರರು ಗೂಗಲ್ ಮ್ಯಾಪ್ ನಂಬಿ ಹಿರೇಬೈಲ್ ರಸ್ತೆಯಲ್ಲಿ ಸಾಗಿ ಮುಂದೆ ದಾರಿ ಕಾಣದೇ ಪರದಾಡುತ್ತಿರುವ ಘಟನೆ ಪದೇ ಪದೇ ಮರುಕಳಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಕುಮಟಾ ಶಿರಸಿ ಮಾರ್ಗದ ರಸ್ತೆ ದುರಸ್ಥಿಕಾರ್ಯ ನಡೆಯಲಿರುವುದರಿಂದ ಮಾರ್ಗ ಬಂದ್ ಮಾಡಲಿದ್ದಾರೆನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ ನಂತರ ಹೊನ್ನಾವರ, ಕುಮಟಾ, ಭಟ್ಕಳ ತಾಲೂಕಿನಿಂದ ಶಿರಸಿ ಸಿದ್ದಾಪುರ ಕಡೆಗೆ ಸಾಗುವ ಹೆಚ್ಚಿನವರು ತಮಗಿರುವ ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಅಪರಿಚಿತ ಸ್ಥಳಗಳಿಗೆ ಹೋಗುವಾಗ ಬಹುತೇಕ ಚಾಲಕರು ಗೂಗಲ್ ಮ್ಯಾಪ್ನ್ನು ಅವಲಂಬಿಸುತ್ತಿರುವುದು ಹೊಸತೇನಲ್ಲ. ಆದರೆ ಇದೇ ಗೂಗಲ್ ಮ್ಯಾಪ್ ನಂಬಿದ ಚಾಲಕರು ಅರೇಅಂಗಡಿ, ಚಿಕ್ಕೊಳ್ಳಿ, ಹಿರೇಬೈಲ್ ರಸ್ತೆಯಲ್ಲಿ ಸಾಗಿ ಕೊನೆಗೂ ಸಿದ್ದಾಪುರಕ್ಕೆ ಸಂಪರ್ಕ ಸಾಧ್ಯವಾಗದೇ ಅತ್ತ ಬಂದ ದಾರಿಯಲ್ಲಿ ಹಿಂತಿರುಗುವದಕ್ಕೂ ಆಗದೆ ಚಡಪಡಿಸುತ್ತಾರೆ.
ಕುಮಟಾ ಶಿರಸಿ ಮಾರ್ಗ ಬಂದ್ ಆದರೂ ಕರಾವಳಿಯಿಂದ ಘಟ್ಟದ ತಾಲೂಕುಗಳನ್ನು ಸಂಪರ್ಕಿಸಲು ಹೊನ್ನಾವರ ಗೇರಸೊಪ್ಪಾ ಮಾವಿನಗುಂಡಿ ಮಾರ್ಗ, ಹೊನ್ನಾವರ ರಾಮತೀರ್ಥ ಅರೇಅಂಗಡಿ ಚಂದಾವರ ಮಾರ್ಗ ಅಥವಾ ಕುಮಟಾದಿಂದ ಚಂದಾವರದಿಂದ ಬಡಾಳ ಸಂತೆಗೂಳಿ ಮೂಲಕ ಸಾಗಿದರೂ ಸಿದ್ದಾಪುರವನ್ನು ತಲುಪಬಹುದು. ಕುಮಟಾದಿಂದ ಚಂದಾವರ ಮಾರ್ಗದಲ್ಲಿ ಗೂಗಲ್ ಮ್ಯಾಪ್ ಹಾಕಿಕೊಂಡು ಬಂದಾಗ ಚಂದಾವರ ನಾಕಾ ಹತ್ತಿರ ಬಂದಾಗ ಎಡಕ್ಕೆ ಮತ್ತು ಬಲಕ್ಕೆ ಎರಡೂ ದಿಕ್ಕಿಗೂ ಮಾರ್ಗವನ್ನು ಸೂಚಿಸುತ್ತದೆ. ಆಕಸ್ಮಾತ ಬಲಕ್ಕೆ ತಿರುಗಿದರೆ ಅರೇ ಅಂಗಡಿ, ಚಿಕ್ಕೊಳ್ಳಿ, ಹಿರೇಬೈಲ್ಲವರೆಗೆಮಾತ್ರ ರಸ್ತೆಯಿದ್ದು ಮುಂದೆ ಹೋಗಲಾರದೆ ಕಕ್ಕಾಬಿಕ್ಕಿಯಾಗುತ್ತಾರೆ.


ರಾಷ್ಟ್ರೀಯ ಹೆದ್ದಾರಿ 66 ರಿಂದ ಹೊನ್ನಾವರ ತಾಲೂಕಿನ ರಾಮತೀರ್ಥ ಅಥವಾ ಹಳದಿಪುರ ಕ್ರಾಸ್ ಇಂದ ಒಳಕ್ಕೆ ಸಾಗಿದಾಗ ಅರೇಅಂಗಡಿ ಮತ್ತು ಹೆಬ್ಬಾರ್ನಕೆರೆ ಬಳಿ ಅರೇಅಂಗಡಿ ಚಂದಾವರ ರಸ್ತೆಯನ್ನು ಸಂಪರ್ಕಿಸಿದಾಗಲೂ ಎಡ ಮತ್ತು ಬಲ ಎರಡೂ ದಿಕ್ಕಿಗೂ ಸಿಗ್ನಲ್ ತೋರಿಸುತ್ತದೆ ಅಪ್ಪಿತಪ್ಪಿ ಬಲಕ್ಕೆ ಹೊರಳಿದರೆ ಮತ್ತದೇ ಚಿಕ್ಕೊಳ್ಳಿ ಹಿರೇ ಬೈಲ್ಮಾರ್ಗದಲ್ಲಿ ಸಾಗಬೇಕಾಗುತ್ತದೆ. ವಾಹನ ಸವಾರರು ಪದೇ ಪದೇ ದಾರಿತಪ್ಪುತ್ತಿರುವ ಕಷ್ಟವನ್ನು ಕಂಡ ನೂತನ ನಾಯ್ಕ ಎಂಬವರು ಸಿದ್ದಾಪುರಕ್ಕೆ ಹೋಗುವವರು ಹಿರೇಬೈಲ್ ಮಾರ್ಗದಲ್ಲಿ ತೆರಳದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದರೂ ಚಾಲಕರು ದಾರಿತಪ್ಪುವುದು ಮಾತ್ರ ನಿಂತಿಲ್ಲ.
ಹಿರೇಬೈಲ್ ಮತ್ತು ಸಿದ್ದಾಪುರ ನಡುವೆ ಸಂಪರ್ಕ ಇಲ್ಲವಾ..?
ಹೀಗೊಂದು ಪ್ರಶ್ನೆಯನ್ನು ಯಾರಾದರೂ ಕೇಳಿದರೆ ಇದೇ ಎಂದೇ ಉತ್ತರವೇ ಸಿಗುತ್ತದೆ. ಹೊನ್ನಾವರದ ಹಿರೇಬೈಲ್ ಮತ್ತು ಸಿದ್ದಾಪುರದ ದೊಡ್ಮನೆ ರಸ್ತೆಗಳ ಮಧ್ಯೆ ಇರುವುದು ಮೂರ್ನಾಲ್ಕು ಕಿಲೋಮೀಟರ್ ಕಾಡಿನದಾರಿ ಮಾತ್ರ. ಅರೇಅಂಗಡಿಯಿಂದ ಹಿರೇಬೈಲ್ವರೆಗೂ ಡಾಂಬರು ರಸ್ತೆಯಿದೆ. ಚಿಕ್ಕೊಳ್ಳಿವರೆಗೂ ರಸ್ತೆಯನ್ನು ದ್ವಿಪಥವಾಗಿ ಬದಲಾಯಿಸಲಾಗಿದೆ. ಶಾರದಾ ಶೆಟ್ಟಿ ಶಾಸಕಿಯಾಗಿದ್ದ ಅವದಿಯಲ್ಲಿ ಕುಮಟಾ ಚಂದಾವರ ಅರೇಅಂಗಡಿ ಹಿರೇಬೈಲ್ ಮೂಲಕ ಸಿದ್ದಾಪುರವನ್ನು ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಅರಣ್ಯ ಇಲಾಖೆಯವರು ಅಡ್ಡಗಾಲು ಹಾಕಿದ್ದರಿಂದ ರಸ್ತೆ ಗುರಿ ತಲುಪಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.
ರಸ್ತೆ ನಿರ್ಮಿಸಿದರೆ ಅರಣ್ಯ ನಾಶ..?
ಕುಮಟಾ ಶಿರಸಿ ರಸ್ತೆ ಅಗಲೀಕರಣಕ್ಕೆ ನಾಶವಾಗುವ ಕಾಡಿನ ಪ್ರತಿಶತ 10 ರಷ್ಟು ಅರಣ್ಯವೂ ಹಿರೇಬೈಲ್ ಸಿದ್ದಾಪುರ ಸಂಪರ್ಕಿಸುವ ರಸ್ತೆ ನಿರ್ಮಾಣದಿಂದ ನಾಶವಾಗುವುದಿಲ್ಲ. ಆದರೂ ಪರಿಸರವಾದಗಳೆಂದುಕೊಂಡವರ ಕಾಟ ಮತ್ತು ಅರಣ್ಯ ಇಲಾಖೆಯ ವಿರೋಧ ಮಾತ್ರ ತಪ್ಪಿಲ್ಲ ಎನ್ನುವ ಮಾತಿದೆ.
ಅರೇಅಂಗಡಿಯಿಂದ ಚಿಕ್ಕೊಳ್ಳಿಯವರೆಗೂ ಕೋಟ್ಯಾಂತರ ರೂಪಾಯಿ ವ್ಯಯಿಸಿ ದ್ವಿಪಥ ರಸ್ತೆ ನಿರ್ಮಾಣವಾಗಿದೆ. ಹಡಿನಬಾಳ ಗುಂಡಬಾಳ ಹಿರೇಬೈಲ್ ರಸ್ತೆಯೂ ದುರಸ್ಥಿಯಾಗುತ್ತಿದೆ. ಇದೇ ಸಮಯದಲ್ಲಿ ಹಿರೇಬೈಲ್ ಆರ್ಮುಡಿ ಮೂಲಕ ಸಿದ್ದಾಪುರವನ್ನು ಸಂಪರ್ಕಿಸುವ ರಸ್ತೆಯ ಮೂರ್ನಾಲ್ಕು ಕಿಲೋಮೀಟರ್ ಸಹ ದುರಸ್ಥಿಯಾದರೆ ಹೊನ್ನಾವರದವರಿಗೆ ಸಿದ್ದಾಪುರ ಮತ್ತಷ್ಟು ಸನಿಹವಾಗಲಿದೆ.
ಮುಖ್ಯಾಂಶಗಳು
ಹಿರೇಬೈಲ್ ಸಿದ್ದಾಪುರ ಸಂಪರ್ಕ ಸಾಧ್ಯವಾದರೆ ಹೊನ್ನಾವರ ಮತ್ತು ಸಿದ್ದಾಪುರ ತಾಲೂಕಿಗೆ ಈಗಿರುವ ಮಾರ್ಗಗಳಲ್ಲಿಯೇ ಅತ್ಯಂತ ಸಮೀಪದ ಮಾರ್ಗವಾಗಲಿದೆ.
ಕುಗ್ರಾಮಗಳಾಗಿರುವ ಹಿರೇಬೈಲ್, ಚಿಕ್ಕೊಳ್ಳಿ, ಆರ್ಮುಡಿ, ತೊಳಸಾಣಿ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ
ಸಂತೆಗೂಳಿ-ಬಡಾಳ, ಗೇರಸೊಪ್ಪಾ-ಮಾವಿನಗುಂಡಿ ಮಾರ್ಗದ ನಂತರ ಸಿದ್ದಾಪುರವನ್ನು ಸಂಪರ್ಕಿಸುವುದಕ್ಕೆ ಅವರೆಡಕ್ಕಿಂತಲೂ ಸಮೀಪದ ಮಾರ್ಗ ಹಿರೇಬೈಲ್ ಆಗಲಿದೆ.
[ ಗೂಗಲ್ ರೂಟ್ ಹಾಕಿಕೊಂಡು ಸಿದ್ದಾಪುರಕ್ಕೆ ಹೋಗುವ ಮಾರ್ಗದ ಹುಡುಕಾಟದಲ್ಲಿ ಅರೇಅಂಗಡಿ ಮೂಲಕ ಹಿರೇಬೈಲ್ ಹೋಗಿ ಅಲ್ಲಿಂದ ಮುಂದೆ ದಾರಿ ಕಾಣದೇ ಚಡಪಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಿರೇಬೈಲ್ಲ್ಲಿ ಮೊಬೈಲ್ ನೆಟ್ವರ್ಕ ಸಹ ಸರಿಯಾಗಿ ಸಿಗುವುದಿಲ್ಲ ಇದರಿಂದ ಅಪರಿಚಿತ ಚಾಲಕರು ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾರೆ. ಈ ಮಾರ್ಗದ ರಸ್ತೆಯನ್ನು ಸಿದ್ದಾಪುರಕ್ಕೆ ಸಂಪರ್ಕಿಸಿದರೆ ಒಳ್ಳೆಯದೇನೋ – ವಿನಾಯಕ ಮಡಿವಾಳ ಅರೇಅಂಗಡಿ]
Leave a Comment