ಭಟ್ಕಳ: ಅರಣ್ಯ ಅಧಿಕಾರಿಗಳ ಕಿರುಕುಳ ದೌರ್ಜನ್ಯ ಮುಂದಿನ 15 ದಿನಗಳಲ್ಲಿ ನಿಯಂತ್ರಿಸಲು ಅರಣ್ಯ ಇಲಾಖೆಗೆ ಕೊನೆಯ ಎಚ್ಚರಿಕೆ ನೀಡುತ್ತಿದ್ದು, ಮುಖ್ಯ ಮಂತ್ರಿ ಆದೇಶ ಪಾಲಿಸದ ಸ್ಥಳೀಯ ಆರ್.ಎಫ್.ಓ. ಕೃತ್ಯ ಖಂಡಿಸಿ ಮುಂದಿನ ತಿಂಗಳು ಚಳಿಗಾಲದ ಅಧಿವೇಶನ ಜರುಗುತ್ತಿರುವ ಸಂದರ್ಭದಲ್ಲಿ ಮುಖ್ಯ ಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಜರುಗಿಸಲಾಗುವುದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದರು.
ಭಟ್ಕಳದ ಎ.ಎಸ್.ಪಿ. ನಿಖಿಲ್ ಅವರ ಮಧ್ಯಸ್ಥಿಕೆಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಚರ್ಚೆಗೆ ಪರಿಹಾರೋಪ ಸಭೆಯಲ್ಲಿ ಅರಣ್ಯ ಇಲಾಖೆಯ ಪರವಾಗಿ ಆಗಮಿಸಿದ ಹೊನ್ನಾವರದ ಎ.ಸಿ.ಎಫ್. ಭೋರಯ್ಯ ಇವರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಗೆ ಸ್ಥಳೀಯ ಆರ್.ಎಫ್.ಓ. ಸವಿತಾ ದೇವಾಡಿಗ ಗೈರು ಆಗಿದ್ದನ್ನು ತೀವ್ರವಾಗಿ ಖಂಡಿಸಿರುವ ಅತಿಕ್ರಮಣ ಹೋರಾಟಗಾರರು, ಸಭೆಗೆ ಆರ್.ಎಫ್.ಓ. ಹಾಜರಿಗೆ ಒತ್ತಾಯಿಸಿ ಅರಣ್ಯ ಸಿಬ್ಬಂಧಿಗಳ ಅಮಾನವೀಯ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ತಾಲೂಕಾ ಅರಣ್ಯ ಅತಿಕ್ರಮಣದಾರರ ಹೋರಾಟಗಾರರ ವೇದಿಕೆಯ ಸದಸ್ಯರು ಅರಣ್ಯ ಸಿಬ್ಬಂದಿಗಳಿಂದ ಜರುಗುತ್ತಿರುವ ದೌರ್ಜನ್ಯದ ಸಾಕ್ಷ್ಯ ಚಿತ್ರ, ವಿಡಿಯೋ, ದಾಖಲೆ ಸಹಿತ ತಾಲೂಕಿನಲ್ಲಿ ಜರುಗುತ್ತಿರುವ ಅರಣ್ಯ ಸಿಬ್ಬಂದಿಗಳ ಕಾನೂನುಬಾಹಿರ ಕೃತ್ಯದ ಕುರಿತು ತೀವ್ರ ಆಕ್ಷೇಪ ಸಭೆಯಲ್ಲಿ ವ್ಯಕ್ತಪಡಿಸಿದರು.
ಆರ್.ಎಫ್.ಓ. ವಿರುದ್ಧ ಆಕ್ರೋಶ: ಕಾನೂನು ಬಾಹೀರವಾಗಿ, ಕಾನೂನಿಗೆ ವ್ಯತಿರಿಕ್ತವಾಗಿ ದೈಹಿಕ ಬಲದಿಂದ ವಿಚಾರಣೆಗೂ ಅವಕಾಶ ನೀಡದೇ ಅತಿಕ್ರಮಣದಾರರ ಮೇಲೆ ದೌರ್ಜನ್ಯ ಎಸಗುವ ಕುರಿತು ಸಭೆಗೆ ಗೈರು ಹಾಜರಿದ್ದ ಸ್ಥಳೀಯ ಆರ್.ಎಫ್.ಓ. ಸವಿತಾ ದೇವಡಿಗ ಇವರನ್ನು ಸಭೆಗೆ ಕರೆಸಬೇಕೆಂದು ಹಾಗೂ ಅವರ ಹೇಳಿಕೆ ಪಡೆಯಬೇಕೆಂದು ಹೋರಾಟಗಾರರು ಆಕ್ರೋಶಭರಿತವಾಗಿ ಅಧಿಕಾರಿಗಳಿಗೆ ಆಗ್ರಹಿಸಿದರು. ಒಂದು ತಾಸಿನ ವರೆಗೂ ಬಾರದ ಅರಣ್ಯ ಸಿಬ್ಬಂಧಿಗಳ ವಿರುದ್ಧ ತೀವ್ರ ತರಹದ ಆಕ್ಷೇಪ ವ್ಯಕ್ತವಾಗಿ ಎ.ಎಸ್.ಪಿ. ನಿಖಿಲ್ ಆವರ ಮಧ್ಯಸ್ಥಿಕೆಯಲ್ಲಿ ಸಭೆ ಮುಂದುವರಿದಿದ್ದು ವಿಶೇಷವಾಗಿತ್ತು.
ಮುಖ್ಯಮಂತ್ರಿ ಹೇಳಿಕೆಗೂ ಕಿಮ್ಮತ್ತಿಲ್ಲ. ಕಳೆದ ವರ್ಷದ ಅಧಿವೇಶನದಲ್ಲಿ ಇನ್ನು ಮುಂದೆ ಅರಣ್ಯ ಅತಿಕ್ರಮಣದಾರರ ವಿರುದ್ಧ ಒಂದೂ ದೌರ್ಜನ್ಯ ಜರುಗದಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದಾಗ್ಯೂ ಭಟ್ಕಳದಲ್ಲಿ ಪದೇ ಪದೇ ಮುಖ್ಯ ಮಂತ್ರಿಗಳ ನಿರ್ದೇಶನಕ್ಕೆ ಕಿಮ್ಮತ್ತು ಇಲ್ಲವೋ? ಎಂಬ ಪ್ರಶ್ನೆ ಸಭೆಯಲ್ಲಿ ಉಪಸ್ಥಿತರಿದ್ದ ಅರಣ್ಯ ಅಧಿಕಾರಿ ಬೋರಯ್ಯ ಅವರಿಗೆ ಪ್ರಶ್ನಿಸಲಾಯಿತು.

ಸಭೆಯಲ್ಲಿ ತಾಲೂಕಾ ಅಧ್ಯಕ್ಷ ರಾಮಾ ಮೊಗೇರ, ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಎಸ್.ಎಂ. ಸೈಯ್ಯದ್ ಪರ್ವಾಝ್, ದೇವರಾಜ ಗೊಂಡ, ಪಾಂಡುರಂಗ ನಾಯ್ಕ, ಸಲೀಂ ರಿಜ್ವಾನ್, ಅಬ್ದುಲ್ ಖಯ್ಯುಂ ಕೋಲಾ, ನಾರಾಯಣ ನಾಯ್ಕ ಹಾಡವಳ್ಳಿ, ದತ್ತಾ ನಾಯ್ಕ, ಶಂಕರ ನಾರಾಯಣ ನಾಯ್ಕ, ಚಂದ್ರು ನಾಯ್ಕ, ಯಶೋಧರ ಪೂಜಾರಿ, ಲೀಲಾ ವೆಂಕಟೇಶ ಮೊಗೇರ ಬೆಳಕೆ, ಲಕ್ಷ್ಮೀ ಮಹಾಬಲೇಶ್ವರ ನಾಯ್ಕ, ಬೀಬಿ ಹಲೀಮಾ ಭಟ್ಕಳ, ಶೋಭಾ ರಾಮಕೃಷ್ಣ ಕಾರ್ವಿ, ದೇವರಾಜ ಗೊಂಡ ಮುಂತಾದವರು ಭಾಗವಹಿಸಿದ್ದರು.
Leave a Comment