ಕಡಲಿನಲೆಗಳ ನಿರಂತರ ಹೊಯ್ದಾಟಕ್ಕೆ ಸಿಕ್ಕು ಕ್ಷಣ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಅಳಿವೆಯ ಸಂರಚನೆ. ದೀಪಾವಳಿಯ ಸಮಯದಲ್ಲಿ ಕಾಸರಕೋಡ ಟೊಂಕ ಅಳಿವೆಯಂತೂ ನೋಡುಗರ ಮನಸೂರೆಗೊಳ್ಳುವಂತ ಸೌಂದರ್ಯ ಸೃಷ್ಠಿಯಿಂದ ಗಮನ ಸೆಳೆಯಿತು.

ಮೀನುಗಾರರ ಪಾಲಿಗೆ ಅಪಾಯಕಾರಿ ಅಳಿವೆ ಎಂದೇ ಕುಖ್ಯಾತಿಯಾಗಿರುವ ಟೊಂಕ ಅಳಿವೆಯಲ್ಲಿ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಬೃಹತ್ ಕಂಬಗಳನ್ನು ನಿರ್ಮಿಸಲು ಅಳಿವೆಯ ಒಡಲನ್ನು ಕೊರೆದ ಪರಿಣಾಮ ರಾಶಿ ರಾಶಿ ಮರಳು ಅಳಿವೆಯಲ್ಲಿ ಶೇಖರಣೆಯಾಗಿದೆ. ದೊಡ್ಡ ದೊಡ್ಡ ದಿಬ್ಬಗಳಾಗಿ ಗೋಚರಿಸುತ್ತಿದ್ದ ಮರಳಿನ ರಾಶಿ ದೀಪಾವಳಿ ಅಮವಾಸ್ಯೆಯ ಭರತದ ಬೃಹತ್ ಅಲೆಗಳ ಹೊಡೆತಕ್ಕೆ ಕರಗಿ ಹೋಗಿವೆ. ಎಂದಿಗಿಂತ ರಭಸವಾಗಿ ಮುನ್ನುಗ್ಗಿಬಂದ ಅಲೆಗಳು ಮರಳಿ ಹೋಗುವಾಗ ದಡದಲ್ಲಿದ್ದ ಮರಳನ್ನೂ ಕೊಚ್ಚಿಕೊಂಡುಹೋಗಿ ಅಳಿವೆಯಲ್ಲಿ ಮರಳಿನ ಪದರುಗಳು ನಿರ್ಮಾಣವಾಗಿವೆ.
ಸುಂದರ ಕಡಲ ತೀರಗಳನ್ನು ಹುಡುಕುತ್ತಾ ವಿದೇಶಗಳಿಗೆ ಅಲೆಯವ ಸಿನೆಮಾ ಮಂದಿ ಉತ್ತರಕನ್ನಡದ ಕರಾವಳಿಯತ್ತ ಕಣ್ಣು ಹಾಯಿಸಿದರೆ ನೈಜತೆಯ ಸೌಂದರ್ಯ ತುಂಬಿ ತುಳುಕುತ್ತಿರುವ ಹತ್ತಾರು ತಾಣಗಳು ಕಣ್ಣಿಗೆ ಬೀಳುತ್ತವೆ. ಕಡಿಮೆ ವೆಚ್ಚದ ಜೊತೆ ಇಲ್ಲಿನ ನಿಸರ್ಗ ಸೌಂದರ್ಯವನ್ನು ಹೊರ ಜಗತ್ತಿಗೆ ತೆರೆದಿಡುವ ಸದುದ್ದೇಶವನ್ನೂ ಈಡೇರಿಸಿಕೊಳ್ಳಬಹುದು. ಆದರೆ ಎಷ್ಟು ಮಂದಿಯಲ್ಲಿ ಈ ಇಚ್ಛಾಶಕ್ತಿ ಇದೆ ಎನ್ನುವುದೇ ಕಾಡುತ್ತಿರುವ ಪ್ರಶ್ನೆ.


ಬ್ರೇಕ್ವಾಟರ್ ನಿರ್ಮಾಣವಾದರೆ ಮರೆಯಾಗುವ ಅಳಿವೆಯ ಈ ಸೌಂದರ್ಯವನ್ನು ಅಷ್ಟರೊಳಗೆ ಮಾತ್ರ ಸವಿಯಬೇಕಿದೆ. ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ಪಡೆದ ಕಾಸರಕೋಡ ಇಕೋ ಬೀಚ್, ಇಕೋ ಸ್ಮಾರ್ಟ ಕೋಸ್ಟಲ್ ವಿಲೇಜ್ ಆಗಿ ಸಿಲೆಕ್ಟ್ ಆಗಿರುವ ಅಪ್ಸರಕೊಂಡ, ಮನಸ್ಸಿಗೆ ಮುದ ನೀಡುವ ಕಾಂಡ್ಲಾ ಬೋರ್ಡ ವಾಕ್ ಇವೆಲ್ಲವೂ ಕೇವಲ ಮೂರ್ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿಯೇ ನಿರ್ಮಾಣವಾಗಿದ್ದು ಕಾಸರಕೋಡ ಹಾಗೂ ಕೆಳಗಿನೂರು ಪಂಚಾಯತ ಪ್ರವಾಸೋದ್ಯಮದಲ್ಲಿ ಹೆಸರುಮಾಡುವ ದಿನ ದೂರವಿಲ್ಲ ಎನಿಸುತ್ತಿದೆ.
Leave a Comment