ಹೊನ್ನಾವರ: “ಅಧಿಕಾರಿಗಳು ರಾಜಕೀಯ ಮಾಡುವುದನ್ನು ಬಿಟ್ಟು ತಮ್ಮ ಕರ್ತವ್ಯ ಸಮರ್ಥವಾಗಿ ನಿಭಾಯಿಸಬೇಕು” ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಉಲ್ಲಾಸ ನಾಯ್ಕ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಧಾನ ವ್ಯಕ್ತಪಡಿಸಿದರು.

ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿತು. ಪಿಡಬ್ಲ್ಯೂಡಿ ಇಲಾಖೆ ಚರ್ಚೆ ಅವಧಿಯಲ್ಲಿ ತಾಲೂಕಿನ ಶಾಸಕರು ನಡೆಸುವ ಯಾವುದೇ ಒಂದು ನೂತನ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯುವ ಸಂದರ್ಭದಲ್ಲಿ ಸ್ಥಳಿಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಗುದ್ದಲಿಪೂಜೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಗಮನಿಸಿದರೆ ಅಧಿಕಾರಿಗಳು ರಾಜಕೀಯ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂಬ ಭಾವನೆ ಮೂಡುತ್ತಿದೆ. ಜನಪ್ರತಿನಿಧಿಗಳಿಗೆ ಹೇಳಬೇಡಿ ಎಂದು ನಿಮಗೆ ಒತ್ತಡವಿದೆಯೆ ಎಂದು ಪ್ರಶ್ನಿಸಿ ಅಧಿಕಾರಿಗಳನಡೆಗೆ ಅಸಮಧಾನ ವ್ಯಕ್ತಪಡಿಸಿದರು.
ಸದಸ್ಯೆ ಲಕ್ಷ್ಮೀ ಗೊಂಡ ದನಿಗೂಡಿಸಿ ಇಂತಹ ಅನುಭವ ನಮಗೂ ಆಗಿದೆ ಈ ಮೊದಲೆಲ್ಲ ಅಧಿಕಾರಿಗಳು ಶಿಷ್ಟಾಚಾರಕ್ಕಾದರೂ ಕರೆಯುತ್ತಿದ್ದರು ಇಗ ಅವರೇ ರಾಜಕಾರಣಿ ತರಹ ಪಕ್ಷಭೇದ ಮಾಡುತ್ತ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲವೆಂದರು.
ಜನಪ್ರತಿನಿಧಿಗಳು ವೇದಿಕೆಯಲ್ಲಿ ಮಾದರಿ ಕ್ಷೇತ್ರವಾಗಲಿದೆ ಎಂದು ಹೇಳುತ್ತಾರೆ ಆದರೆ ಕ್ಷೇತ್ರದ ಅಭಿವೃದ್ಧಿ ಯಾವ ಹಂತದಲ್ಲಿದೆ ಎಂದು ಗಮನಸಿಬೇಕಾದರೆ ತಾಲೂಕಿನ ಖರ್ವಾ-ಮಾವಿನಕುರ್ವಾ ತಲುಪುವ ಮುಖ್ಯ ರಸ್ತೆಯನ್ನು ಒಮ್ಮೆ ಕಣ್ತುಂಬಿಕೊಳ್ಳಿ. ದೊಡ್ಡ ದೊಡ್ಡ ಕಾಮಗಾರಿ ತಂದಿದೆ ಎಂದು ವೇದಿಕೆ ಮೇಲೆ ಬೊಬ್ಬೆ ಹೊಡೆಯುವವರು ಇದನ್ನು ಗಮನಸಿಲ್ಲವಾ ಎಂದು ಸಭೆಯಲ್ಲಿ ಅಧ್ಯಕ್ಷ ಉಲ್ಲಾಸ ನಾಯ್ಕ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಆರೋಗ್ಯ ಇಲಾಖೆ ಚರ್ಚೆಯಲ್ಲಿ ಗೆರುಸೊಪ್ಪಾ,ಕುದ್ರಗಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದೇ ಒಂದು ಲ್ಯಾಬ್ ಟೆಕ್ನಿಷಿಯನ್ ಇಲ್ಲ ಇದ್ದವರನ್ನು ತಾಲೂಕ ಆಸ್ಪತ್ರೆಗೆ ನೇಮಕ ಮಾಡುತ್ತಾರೆ ಈ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಶೀಘ್ರವಾಗಿ ನೇಮಕ ಮಾಡಬೇಕೆಂದರು.
ಸದಸ್ಯ ಆರ್.ಪಿ ನಾಯ್ಕ ತೋಟಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆಸಿದ ಕೆಲಸಗಳಿಗೆ ವರ್ಷ ಕಳೆಯುತ್ತಾ ಬಂದರು ಫಲಾನುಭವಿ ಖಾತೆಗೆ ಹಣ ಜಮಾವಾಗಿಲ್ಲ ಎಂದರು. ಶೀಘ್ರವಾಗಿ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ ಇಲಾಖೆ ಚರ್ಚೆಯಲ್ಲಿ ಫಸಲ್ ಭೀಮಾ ಯೋಜನೆಯ ವೈಪಲ್ಯದ ಕುರಿತು ಸಭೆಯಲ್ಲಿ ಸದಸ್ಯರು, ಅಧ್ಯಕ್ಷರು ಗಂಭೀರವಾಗಿ ಚರ್ಚೆ ನಡೆಸಿ ಇದು ರೈತರಿಗೆ ‘ಫಸಿ ಭೀಮಾ’ ಯೋಜನೆಯಾಗಿದೆ ಎಂದು ಲೇವಡಿ ಮಾಡಿದರು.
ಸಾರಿಗೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಹೆಸ್ಕಾಂ,ಬಂದರು ಇಲಾಖೆ, ರೇಷ್ಮೆ, ಅಕ್ಷರ ದಾಸೋಹ,ಸಮಾಜ ಕಲ್ಯಾಣ,ಅರಣ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆ ಚರ್ಚೆ ನಡೆಯಿತು.
ಸಭೆಯಲ್ಲಿ ತಹಶಿಲ್ದಾರ ವಿವೇಕ್ ಶೇಣ್ವಿ, ತಾ.ಪಂ ಉಪಾಧ್ಯಕ್ಷೆ ಲಲಿತಾ ನಾಯ್ಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಖಾಜಿ ಮಹಮದ್ ಇರಶಾದ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕರೀಂ ಅಸದಿ, ತಾಲೂಕ ಪಂಚಾಯತ ಸದಸ್ಯರು, ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.
Leave a Comment