ಹೊನ್ನಾವರ ಪಟ್ಟಣದ ನಡುವೆ ಇದ್ದ ಗುಡ್‍ಲಕ್ ಕಟ್ಟಡದ ಒಡೆತನಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿನ ಸಮಸ್ಯೆ ಕೋರ್ಟ ಮೆಟ್ಟಿಲೇರಿದ ಪರಿಣಾಮ ಪಟ್ಟಣಪಂಚಾಯತ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಲು ಕಟ್ಟಡಕ್ಕೆ ಬೀಗಮುದ್ರೆ ಹಾಕಿದ್ದಾರೆ.

ಆದರೆ ಯಾವುದೇ ತಪ್ಪು ಮಾಡದ ತಿಂಗಳ ಬಾಡಿಗೆಯನ್ನು ನಿಯತ್ತಾಗಿ ಕಟ್ಟುತ್ತಾ ಬಂದಿದ್ದ ಕಟ್ಟಡದಲ್ಲಿನ ವ್ಯಾಪಾರಿಗಳು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದ ಬಗ್ಗೆ ಅಂಗಡಿಕಾರರು ಹತಾಶರಾಗಿ ಮುಂದೇನು ಎನ್ನುವ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಂಡು ಉತ್ತರಕ್ಕಾಗಿ ತಡಕಾಡುತ್ತಿದ್ದಾರೆ.
ಕೊರೊನಾ ಲಾಕ್‍ಡೌನ್ ಕಾರಣದಿಂದ ಸಂಪೂರ್ಣ ಸ್ಥಗಿತವಾಗಿದ್ದ ವ್ಯಾಪಾರ ವಹಿವಾಟುಗಳು ಕಳೆದೆರಡು ತಿಂಗಳಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ ಎನ್ನುತ್ತಿರುವಾಗಲೇ ಗುಡ್‍ಲಕ್ ಕಟ್ಟಡದ ವಿವಾದವೂ ತಾರಕಕ್ಕೇರಿದೆ. ಸಮಸ್ಯೆ ಕೋರ್ಟ ಅಂಗಳಕ್ಕೆ ಹೋದ ಮಾಲಕತ್ವದ ನಿರ್ಧಾರವಾಗದೇ ನಂತರ ಕಟ್ಟಡ ಕೊಠಡಿಗಳನ್ನು ಬಾಡಿಗೆ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಲೈಸನ್ಸ್ ನವೀಕರಿಸುವುದು ಸಾಧ್ಯವಾಗಿಲ್ಲ. ವ್ಯಾಪಾರಿ ಲೈಸೆನ್ಸ್ ಇಲ್ಲ ಎನ್ನುವ ಕಾರಣಕ್ಕೆ ಪಟ್ಟಣಪಂಚಾಯತ ಅಂಗಡಿಗಳಿಗೆ ಬೀಗ ಹಾಕಿದೆ. ವ್ಯಾಪಾರದಲ್ಲಿನ ದುಡಿಮೆಯನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದವರಿಗೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಂಗಡಿಕಾರರ ಹಿತಕ್ಕಾಗಿಯಾದರೂ ವ್ಯಾಜ್ಯ ಕೋರ್ಟಲ್ಲಿ ತೀರ್ಮಾನವಾಗುವವರೆಗೆ ಕಟ್ಟಡವನ್ನು ಪಟ್ಟಣಪಂಚಾಯತ ತನ್ನ ಸುಪರ್ಧಿಗೆ ಪಡೆದು ಅಂಗಡಿಕಾರರಿಗೆ ವ್ಯಾಪಾರ ನಡೆಸಲು ಮಾನವೀಯ ನೆಲೆಯಲ್ಲಿ ಅವಕಾಶಮಾಡಿಕೊಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
Leave a Comment