ಹೊನ್ನಾವರ: ಅನುದಾನಿತ ಕಾಲೇಜುಗಳಲ್ಲಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರ ಕಳೆದ ಹಲವಾರು ವರ್ಷಗಳಿಂದ ಅನುಮತಿ ನೀಡದಿರುವುದರಿಂದ ಈ ಶಿಕ್ಷಣ ಸಂಸ್ಥೆಗಳು ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂದಿದೆ ಎಂದು ಉತ್ತರ ಕನ್ನಡ ಜಿಲ್ಲಾ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರ ಒಕ್ಕೂಟದ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ ಮಂಗಳವಾರ ನಡೆದ ಒಕ್ಕೂಟದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯಾನಂತರ ಶಿಕ್ಷಣ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ ಈ ಅನುದಾನಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ತಾರತಮ್ಯ ಹಾಗೂ ನಿರ್ಲಕ್ಷ್ಯ ಧೋರಣೆಗಳಿಂದಾಗಿ ಇಂದು ಕವಲುದಾರಿಯಲ್ಲಿವೆ.ಶುಲ್ಕ ವಿನಾಯತಿ,ಉಪನ್ಯಾಸಕರ ನೇಮಕಾತಿ ಮೊದಲಾದ ಸೌಲಭ್ಯಗಳನ್ನು ಸರ್ಕಾರಿ ಕಾಲೇಜುಗಳಿಗೆ ಮಾತ್ರ ನೀಡಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಕಡೆಗಣಿಸಲಾಗುತ್ತಿದೆ.
20 ವರ್ಷಗಳ ಹಿಂದೆ ಪದವಿ ಕಾಲೇಜುಗಳಿಂದ ಪದವಿ ಪೂರ್ವ ಕಾಲೇಜುಗಳನ್ನು ಬೇರ್ಪಡಿಸುವ ಆದೇಶ ನೀಡಿದ ಸರ್ಕಾರ ಈ ಕಾಲೇಜುಗಳ ಹುದ್ದೆಗಳಿಗೆ ಅನುದಾನ ನೀಡಿಲ್ಲ.1995ರಿಂದ ಸಂಸ್ಥೆ ಮಾಡಿಕೊಳ್ಳುವ ತಾತ್ಕಾಲಿಕ ಉಪನ್ಯಾಸಕರ ಸಂಬಳ ಅನುದಾನವನ್ನೂ ಸರ್ಕಾರ ನಿಲ್ಲಿಸಿದೆ.ಮೂಲ ಸೌಕರ್ಯಗಳ ಅಭಿವೃದ್ಧಿಗೆ ಯುಜಿಸಿ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಲಾಗಿದೆ.ಕಳೆದ ಹತ್ತಾರು ವರ್ಷಗಳಿಂದ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದ ಸರ್ಕಾರಗಳೂ ಅನುದಾನಿತ ಕಾಲೇಜುಗಳ ಬಗ್ಗೆ ಈ ತಾರತಮ್ಯ ನೀತಿ ಅನುಸರಿಸುತ್ತ ಬಂದಿವೆ ಎಂದು ಅವರು ಹೇಳಿದರು.
ಅನುದಾನಿತ ಕಾಲೇಜುಗಳು ತೀವ್ರ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲೂ ಸುಸಜ್ಜಿತ ಪ್ರಯೋಗಾಲಯ ಸೇರಿದಂತೆ ಸರ್ಕಾರಿ ಕಾಲೇಜುಗಳಿಗಿಂತ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿವೆ.ಖಾಲಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದರೆ ಅನುದಾನಿತ ಕಾಲೇಜುಗಳ ಮುಖ್ಯ ಸಮಸ್ಯೆ ಬಗೆಹರಿಯಲಿದ್ದು ಅನುಮತಿ ನೀಡುವಂತೆ ಕೋರಿ ಒಕ್ಕೂಟದ ವತಿಯಿಂದ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಮಂಡಳಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ,ಕಾರ್ಯದರ್ಶಿ ಪ್ರೊ.ಎಸ್.ಎಸ್.ಹೆಗಡೆ,ಕುಮಟಾದ ಕೆನರಾ ಸೊಸೈಟಿಯ ಕಾರ್ಯದರ್ಶಿ ವಿನೋದ ಪ್ರಭು,ಜಿ.ಎಸ್.ಭಟ್ಟ ಉಪ್ಪೋಣಿ,ಸುಧೀರ ಭಟ್ಟ,ಡಾ.ಕೆ.ಬಿ.ಕಿಣಿ,ಕೃಷ್ಣಮೂರ್ತಿ ಭಟ್ಟ,ಎಸ್.ಎಂ.ಭಟ್ಟ,ಪ್ರೊ.ಜಿ.ಪಿ.ಹೆಗಡೆ,ಸುಧೀರ್ ಭಟ್,ಡಾ.ಕೆ.ಬಿ.ಕಿಣಿ,ಸುಜಾತಾ ಲಾಡ್,ಡಾ.ಪ್ರಕಾಶ ಪಂಡಿತ ಉಪಸ್ಥಿತರಿದ್ದರು.
Leave a Comment