ಹಿಂದೂಗಳು ದೇವರೆಂದೇ ಪೂಜಿಸುವ ಗೋವುಗಳ ಕಳ್ಳಸಾಗಾಣಿಕೆ ಮತ್ತು ಮಾಂಸಕ್ಕಾಗಿ ಅವುಗಳ ವಧೆಯನ್ನು ಯಾರೂ ಸಮರ್ಥಿಸಲಾರರು. ಆದರೆ ಅಪರಿಚಿತರ ಮೇಲೆ ನಡೆಯುತ್ತಿರುವ ದಾಳಿ, ಹಲ್ಲೆಯಂತ ಹಿಂಸಾಪ್ರವೃತ್ತಿಯ ಗೂಂಡಾ ವರ್ತನೆಗೆ ಹಾಗೂ ರಾತ್ರಿ ಸಮಯದಲ್ಲಿ ಕೆಲವರು ನಡೆಸುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಗೋ ರಕ್ಷಣೆಯ ಹೆಸರು ದುರ್ಬಳಕೆಯಾಗುತ್ತಿದೆ ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎನ್ನುವ ಅಭಿಪ್ರಾಯ ಸಾರ್ವಜನಿಕವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.

ಹಿಂದಿನ ವಾರ ತಾಲೂಕಿನ ಜಲವಳ್ಳಿ ಗ್ರಾಮದ ಕೆರವಳ್ಳಿಯಲ್ಲಿ ನಡೆದ ಗೋ ಕಳ್ಳಸಾಗಾಣಿಕೆ ತಡೆದ ಪ್ರಕರಣವೊಂದು ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಿಗಿಗೊಳ್ಳಬೇಕಾದ ಅಗತ್ಯವನ್ನು ಮನಗಾಣಿಸಿದೆ. ಗೋವುಗಳ ಕಳ್ಳತನ ಮಾಡಿದ್ದಲ್ಲದೇ ತಡೆಯಲು ಮುಂದಾದ ಬಾಲಕೃಷ್ಣ ಗೌಡ ಎಂಬವರಮೇಲೆ ಹಲ್ಲೆ ಮಾಡಿದರು ಎಂದು ಸುಬ್ರಹ್ಮಣ್ಯ ಗೌಡ ಎನ್ನುವವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಇರ್ಫಾನ್ ಖಾನ್, ತಿಮ್ಮಪ್ಪ ನಾಯ್ಕ, ಉಮೇಶ ನಾಯ್ಕ, ಮತೀನ್ ಮತ್ತು ಮುಜಾಫರ್ ಎಂಬವರ ವಿರುದ್ಧ ಗೋ ಕಳ್ಳತನದ ಆರೋಪವಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಇರ್ಫಾನ್ ಖಾನ್ ಸಹ ದೂರು ನೀಡಿದ್ದು ಜಲವಳಕರ್ಕಿಯ ಉಮೇಶ ನಾಯ್ಕ ಅವರ ಮನೆಯಿಂದ ದನಗಳನ್ನು ತುಂಬಿಕೊಂಡು ಹೆರಂಗಡಿಗೆ ಹೋಗುತ್ತಿರುವಾಗ ಸುಬ್ರಹ್ಮಣ್ಯ ಗೌಡ, ರಮೇಶ ನಾಯ್ಕ, ಬಾಲಕೃಷ್ಣ ಗೌಡ, ಮಣಿಕಂಠ ಎಂಬವರು ರಾತ್ರಿ 1 ಗಂಟೆಗೆ ಬೊಲೆರೋ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆಮಾಡಿ ಬೊಲೆರೋ ಗಾಜುಗಳನ್ನು ಒಡೆದು ಲುಕ್ಸಾನು ಮಾಡಿ ಜೀವ ಬೆದರಿಕೆ ಹಾಕಿರುವ ಪ್ರಕರಣವೂ ದಾಖಲಾಗಿದೆ.

ಇದರ ನಡುವೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ ಘಟನೆಯೊಂದು ಈ ಗೋವುಗಳ ಕಳ್ಳಸಾಗಾಟ ಮತ್ತು ರಕ್ಷಣೆಯ ನಡುವೆ ನಡೆದು ಹೋಗಿದೆ. ಗೋ ರಕ್ಷಕರು ಎಂದು ಹೇಳಿಕೊಂಡವರು ಗೋ ಕಳ್ಳಸಾಗಾಟದ ಆರೋಪಿಗಳಲ್ಲಿ ಒಬ್ಬನಾದ ಉಮೇಶ ನಾಯ್ಕ ಎಂಬಾತನ ಕೈ ಕಾಲು ಕಟ್ಟಿಹಾಕಿ ಬಟ್ಟೆ ಬಿಚ್ಚಿ ಹುಟ್ಟುಡುಗೆಯಲ್ಲಿ ಹಿಗ್ಗಾ ಮುಗ್ಗಾ ಮಾರಣಾಂತಿಕವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕದ್ದು ಸಾಗಿಸುತ್ತಿದ್ದರು ಎನ್ನಲಾದ ಗೋವುಗಳ ಸಾಗಾಟ ತಡೆದಿರುವುದು ಪ್ರಶಂಸಾರ್ಹವಾದರೂ ಕಳ್ಳತನದ ಆರೋಪ ಸಾಬೀತಾಗುವ ಮೊದಲೇ ಕಾನೂನು ಕೈಗೆತ್ತಿಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಬಟ್ಟೆ ಬಿಚ್ಚಿ ನಗ್ನಗೊಳಿಸಿ ಹೊಡೆದು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಗೋ ರಕ್ಷಕರು ಎಂದು ಹೇಳಿಕೊಳ್ಳುವವರಿಗೆ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಕೊಟ್ಟವರು ಯಾರು..? ಇದನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಗುಂಪು ಹಲ್ಲೆ ಅಥವಾ ಹತ್ಯೆಗಳಿಗೆ ಪ್ರಚೋದನೆ ಕೊಟ್ಟಂತೆ ಆಗುವುದಿಲ್ಲವಾ..? ವೈಯ್ಯಕ್ತಿಕ ದ್ವೇಷದ ಹಲ್ಲೆ ಹೊಡೆದಾಟಗಳಿಗೂ ಗೋ ರಕ್ಷಣೆಯ ಬಣ್ಣ ಬಳಿದರೆ ಕಾನೂನು ಏನು ಮಾಡುತ್ತದೆ ಎನ್ನುವ ಹತ್ತಾರು ಪ್ರಶ್ನೆಗಳು ಉದ್ಭವಿಸಿದೆ. ಗೋ ರಕ್ಷಣೆ ಹೆಸರಲ್ಲಿ ಸಾರ್ವಜನಿಕರ ಭಾವನಾತ್ಮಕ ಬೆಂಬಲ ಗಿಟ್ಟಿಸಿಕೊಳ್ಳುವ ಗುಂಪು ನಡೆಸುವ ನೈತಿಕ ಪೊಲೀಸ್‍ಗಿರಿಗೆ, ಅಕ್ರಮಗಳಿಗೆ ಪೊಲೀಸ್ ಇಲಾಖೆಯ ಬೆಂಬಲ ಇದೆಯಾ ಇಲ್ಲವಾ ಎನ್ನುವುದು ಸಧ್ಯ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

Leave a Comment