ಭಟ್ಕಳ: ಕಳೆದ ಬಾರಿ ಜನಸಾಗರದ ನಡುವೆ ವಿಜೃಂಭನೆಯಿಂದ ನಡೆದಿದ್ದ ರಾಜ್ಯದಲ್ಲಿಯೇ ಸುಪ್ರಸಿದ್ದ ಶಕ್ತಿ ಸ್ಥಳವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವರ ವರ್ಷದ ಜಾತ್ರೋತ್ಸವವೂ ಈ ಈ ವರ್ಷ ಕೋವಿಡ್ ಮಾರ್ಗಸೂಚಿಯಂತೆ ನಾಳೆಯಿಂದ ಐದು ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ಬರುವಂತಹ ಭಕ್ತರಿಗೆ ಎಲ್ಲಾ ವ್ಯವಸ್ಥೆ ಸಹಿತ ಧಾರ್ಮಿಕ ಕಾರ್ಯಕ್ರಮಕ್ಕೆ ತಯಾರಿಗಳು ನಡೆಯುತ್ತಿವೆ.
ದಕ್ಷಿಣೋತ್ತರ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಯಾಗಿರುವ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯಲ್ಲಿ ಊರ ಹಾಗೂ ಪರ ಊರಿನ ಭಕ್ತರು ಬಂದು ಪ್ರತಿ ವರ್ಷದಂದು ಈ ಸಂಧರ್ಭದಲ್ಲಿ ವಿವಿಧ ರೂಪದಲ್ಲಿ ಹರಕೆ ತಿರಿಸುವುದು ರೂಢಿಯಲ್ಲಿದೆ. ಈ ಬಾರಿಯ ಜಾತ್ರೆಯಲ್ಲಿ ಕೋವಿಡ್ ಕರಿನೆರಳಿನ ಮಧ್ಯೆಯೇ ಜಾತ್ರಾ ಸಂಭ್ರಮವೂ ಮೆರಗು ನೀಡಿದೆ. ಈಗಾಗಲೇ ದೇವಸ್ಥಾನದಲ್ಲಿ ನಾಳೆಯಿಂದ ನಡೆಯಲಿರುವ ಜಾತ್ರೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ವಿಶೇಷವಾಗಿ ದೇವಸ್ಥಾನದ ಪ್ರಾಂಗಣವನ್ನು ವಿವಿಧ ಬಗೆಯ ಹೂವಿನಿಂದ ಅಲಂಕೃತಗೊಳಿಸಲಾಯಿತು.
ಜಾತ್ರೆಯೂ ನಾಳೆಯಿಂದ ಅಂದರೆ ಜನವರಿ ತಿಂಗಳಿನಲ್ಲಿ 23ರಂದು ಆರಂಭವಾಗುವ ಜಾತ್ರೆಯಲ್ಲಿ ಮೊದಲ ದಿನ ಹಾಲ ಹಬ್ಬ, ಜನವರಿ 24 ರಂದು ಎರಡನೇ ದಿನ ಕೆಂಡ ಸೇವೆ ಹಾಗೂ ನಂತರದ ದಿನಗಳಲ್ಲಿ ತುಲಾಭಾರ ಸೇವೆಯು ಅತ್ಯಂತ ವಿಶೇಷವಾಗಿದೆ. ಸೋಡಿಗದ್ದೆ ಶ್ರೀ ಮಹಾಸತಿ ದೇವಿಯೂ ಅಸಂಖ್ಯಾತ ಭಕ್ತರನ್ನು ಹೊಂದಿದ್ದು, ಜಾತ್ರೆಯಲ್ಲಿ ದೇವರಿಗೆ ಗೊಂಬೆಗಳನ್ನು ಅರ್ಪಿಸುವುದು ಪ್ರಮುಖ ಹರಕೆಗಳಲ್ಲಿ ಒಂದು. ಗೊಂಬೆಗಳಲ್ಲಿಯೂ ಕೂಡಾ ಮೂರು ಗಾತ್ರದ ಗೊಂಬೆಗಳನ್ನು ಅರ್ಪಿಸಲಾಗುತ್ತಿದ್ದು ಭಕ್ತರು ತಮ್ಮ ತಮ್ಮ ಶಕ್ತ್ಯಾನುಸಾರ ಹರಕೆಯ ಗೊಂಬೆಗಳನ್ನು ನೀಡುತ್ತಾರೆ.
ಗೊಂಬೆಗಳಲ್ಲಿ ಮಹಾಸತಿ, ಜಟ್ಟಿಗರಾಯ, ಮರದ ಹುಲಿರಾಯ, ನಾಗರಕಲ್ಲು, ಹಾಯ್ ಗೂಳಿ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸಲಾಗುತ್ತಿದೆ. ಗೊಂಬೆಗಳ ಹರಕೆ ಒಂದು ವಿಧವಾದರೆ ಕೆಂಡ ಕಾಣಿಕೆ, ತುಲಾಭಾರ, ಬಲಿ ಸಮರ್ಪಣೆ, ಹೂವಿನಪೂಜೆ ಮತ್ತೊಂದು ರೀತಿಯ ಹರಕೆಯಾಗಿದೆ. ಆದರೆ ಇಲ್ಲಿ ಗೊಂಬೆ ಹರಕೆಯೇ ಪ್ರಸಿದ್ದಿಯಾಗಿದ್ದು ಶಕ್ತಾನುಸಾರ ಗೊಂಬೆ ಕಾಣಿಕೆ ನೀಡುವುದು ವಿಶೇಷವಾಗಿದೆ. ಪ್ರತಿ ನಿತ್ಯ ಭಕ್ತರು ಹೂವಿನ ಪೂಜೆ, ತೊಟ್ಟಿಲು ಸಮರ್ಪಣೆ, ಕಣ್ಣು, ಇತ್ಯಾದಿಗಳನ್ನು ಸಮರ್ಪಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಕಷ್ಟದಲ್ಲಿದ್ದಾಗ ಹರಿಕೆ ಹೇಳಿಕೊಂಡು ಅವುಗಳನ್ನು ಜಾತ್ರೆಯ ಸಂದರ್ಭದಲ್ಲಿ ತೀರಿಸುವುದರಿಂದ ದೇವಿ ಸಂತುಷ್ಟಳಾಗಿ ತಮ್ಮ ಹರಿಕೆ ಒಪ್ಪಿಕೊಳ್ಳುತ್ತಾಳೆನ್ನುವದು ಭಕ್ತರ ನಂಬಿಕೆಯಾಗಿದೆ.
Leave a Comment