ಹೊನ್ನಾವರ: `ಮಕ್ಕಳಲ್ಲಿ ವಿವಿಧ ರೀತಿಯ ಪಠ್ಯ, ಪಠ್ಯೇತರ ಚಟುವಟಿಕೆ, ಕ್ರೀಡಾ ಚಟುವಟಿಕೆಗಳಿಗೆ ಶಿಕ್ಷಕರು ನೀಡುತ್ತಿದ್ದ ಪ್ರೋತ್ಸಾಹ ಅನನ್ಯವಾಗಿದೆ’ ಎಂದು ಚಂದಾವರ ಗ್ರಾಪಂ ಸದಸ್ಯ ಹನುಮಂತ ನಾಯ್ಕ ಹೇಳಿದರು.

ತಾಲೂಕಿನ ಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಶಾಲೆಯ ಬಹುತೇಕ ಶಿಕ್ಷಕರು, ಸೇವೆಯಿಂದ ನಿವೃತ್ತರಾದ ಶೋಭಾ ಭಂಡಾರಿ ಅವರು ಹಾಗೂ ವರ್ಗಾವಣೆಗೊಂಡ ಶಿಕ್ಷಕಿ ಶೈಲಾ ಭಟ್ಟ ಅವರು ಎಲ್ಲಾ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದವರಾಗಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕ ಸಿಬ್ಬಂದಿಗಳು ಹಾಗೂ ಪಾಲಕರ ಜೊತೆಗಿನ ಸಹಮತ, ನಿಸ್ವಾರ್ಥ ಸೇವೆ ಎಲ್ಲರಿಗೂ ಮೆಚ್ಚುಗೆಯಾಗಿದೆ. ವ್ಯಕ್ತಿ ಅಳಿದರೂ ವ್ಯಕ್ತಿತ್ವ ಅಳಿಯುವುದಿಲ್ಲ ಎಂಬಂತೆ ಇಂದು ಸನ್ಮಾನಿತರಾದ ಇಬ್ಬರೂ ಶಿಕ್ಷಕರೂ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳೂ ಸಹ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು. ಸತತ 14 ವರ್ಷಗಳ ಕಾಲ ನಮ್ಮೂರ ಶಾಲೆಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗುತ್ತಿರುವ ಶೋಭಾ ಭಂಡಾರಿ ಅವರ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಆಶಿಸಿದರು.
ಸೇವೆಯಿಂದ ನಿವೃತ್ತರಾದ ಶೋಭಾ ಭಂಡಾರಿ ಹಾಗೂ ವರ್ಗಾವಣೆಗೊಂಡ ಶಿಕ್ಷಕಿ ಶೈಲಾ ಭಟ್ಟ ಅವರನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಗ್ರಾಪಂ ಸದಸ್ಯ ಹನುಮಂತ ನಾಯ್ಕ ತಮ್ಮ ತಾಯಿ ನಾಗಮ್ಮ ಗೋವಿಂದ ನಾಯ್ಕ ಅವರ ಹೆಸರಿನಲ್ಲಿ ಕಳೆದ ಸಾಲಿನಲ್ಲಿ 7ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಿದರು. ಶಾಲೆಗೆ ನೆನಪಿನ ಕಾಣಿಕೆಯಾಗಿ `ಸ್ಟ್ಯಾಂಡ್ ಫ್ಯಾನ್' ಕೊಡುಗೆಯಾಗಿ ನೀಡಿದರು. .
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ,ಎಸ್‍ಡಿಎಂಸಿ ಅಧ್ಯಕ್ಷ ಮಾರುತಿ ನಾಯ್ಕ, ಗ್ರಾಪಂ ಸದಸ್ಯರಾದ ಅಶ್ವಿನಿ ನಾಯ್ಕ, ಗಣಪಿ ಮುಕ್ರಿ, ದೇವಾಲಯ ಕಮಿಟಿ ಅಧ್ಯಕ್ಷ ಪರಮೇಶ್ವರ ನಾಯ್ಕ, ಸಮಾಜ ಸೇವಕ ಹರಿಹರ ಭಂಡಾರಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಗೀತಾ ಭಟ್ಟ ಇತರರು ಉಪಸ್ಥಿತರಿದ್ದರು. ಶಾಲಾ ಮುಖ್ಯಾಧ್ಯಾಪಕ ಸುರೇಶ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಗಂಗೂಬಾಯಿ ಭಾಗ್ವತ್ ವಂದಿಸಿದರು.
Leave a Comment