ಹೊನ್ನಾವರ –ತಾಲೂಕಿನ ಕುಗ್ರಾಮವಾದ ತೊಳಸಾಣಿಯಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಳ್ಳಿಬೇಟಿ ಹಾಗೂ ಗ್ರಾಮ ವಾಸ್ತವ್ಯ ನಡೆಯಿತು.
ಸರ್ಕಾರಿ ಸವಲತ್ತುಗಳನ್ನು ಪಡೆಯಲು ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಛೇರಿಗೆ ಅಲೆದು ಬೇಸತ್ತಿದ್ದ ಗ್ರಾಮಸ್ಥರು ಇಂದು ತಮ್ಮ ಬಳಿಗೇ ಬಂದ ಅಧಿಕಾರಿಗಳೆದುರು ಒಂದೇ ಉಸುರಿಗೆ ಸಾಲು ಸಾಲು ಬೇಡಿಕೆಗಳ ಪಟ್ಟಿಯನ್ನಿಟ್ಟು ಈಡೇರಿಸುವಂತೆ ಮನವಿ ಮಾಡಿದರು.

ಮುಖ್ಯವಾಗಿ ಮೊಬೈಲ್ ನೆಟ್ವರ್ಕ, ಪಡಿತರ ವಿತರಣಾ ಕೇಂದ್ರ, ರಂಗಮಂದಿರ, ಅರಣ್ಯ ಅತಿಕ್ರಮಣದಾರರ ತೊಂದರೆ, ರಸ್ತೆ ಸಮಸ್ಯೆ, ಮಂಗನ ಖಾಯಿಲೆ ಸಹಿತ ಕಾಡು ಹಾಗೂ ನಾಡು ಬೆರೆತಂತಿರುವ ಕುಗ್ರಾಮದಲ್ಲಿ ಕಾಡುತ್ತಿರುವ ನೂರಾರು ಸಮಸ್ಯೆಗಳನ್ನು ಪಟ್ಟಿಮಾಡಿದರು. ಗ್ರಾಮಸ್ಥರ ಅಹವಾಲನ್ನು ಸಾವಧಾನದಿಂದ ಆಲಿಸಿದ ತಹಶಿಲ್ದಾರ್ ಹಾಗೂ ಇತರೇ ಅಧಿಕಾರಿಗಳು ಸಾಧ್ಯವಿರುವುದನ್ನು ಮಾಡುವುದಾಗಿಯೂ ಉಳಿದವುಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿಯೂ ತಿಳಿಸಿದರು.
ಪಡಿತರ ವಿತರಣಾ ಕೇಂದ್ರ
ತೊಳಸಾಣಿ, ಅಠಾರ, ದರ್ಬೆಜಡ್ಡಿ, ಕಾನಕ್ಕಿ, ಮೇಲಿನಕೇರಿ, ಕೆರೆಕೊಣ, ಕೆರೆಮನೆಕಚ್ಚರಿಕೆ, ಹಾಲ್ತೋಡ, ಬೋಳ್ಗೆರೆ, ತೊಲಾಕುಳಿ, ಉಗ್ರಾಣಿಮನೆ, ಅಡಿಮನೆ, ಬೆಣ್ಣೆಮನೆ, ಕಾಸನಬೇಣ, ಹೊಯ್ನೀರು ಮುಂತಾದ ಭಾಗದಲ್ಲಿ ಕೂಲಿಕಾರ್ಮಿಕರು, ದಲಿತರು ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಗುಡ್ಡಗಾಡು ಪ್ರದೇಶವಾಗಿರುವ ಜೊತೆಗೆ ಬೌಗೋಳಿಕವಾಗಿಯೂ ವಿಸ್ತಾರವಾಗಿದೆ ಅರೇಅಂಗಡಿಯಲ್ಲಿರುವ ಪಡಿತರ ವಿತರಣಾ ಕೇಂದ್ರ ಒಂದನ್ನೇ ಅವಲಂಬಿಸಿರುವುದರಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ. ಮೇಲಿನ ಮಜರೆಗಳಿಗೆ ಮಧ್ಯವರ್ತಿ ಸ್ಥಳದಲ್ಲಿ ಪಡಿತರ ವಿತರಣಾ ಕೇಂದ್ರ ತೆರೆಯುವಂತೆ ಗ್ರಾಮಸ್ಥರು ತಹಶಿಲ್ದಾರ್ ಅವರಲ್ಲಿ ಮನವಿ ಮಾಡಿದರು.

ಉಪ ಆರೋಗ್ಯ ಕೇಂದ್ರದ ಬೇಡಿಕೆ
ತಾಲೂಕು ಕೇಂದ್ರದಿಂದ 20 ಕಿಲೋಮೀಟರ್ ದೂರದಲ್ಲಿರುವ ತೊಳಸಾಣಿಯಲ್ಲಿ ಯಾರಿಗೇ ಆರೋಗ್ಯ ಕೆಟ್ಟರೂ ಹಗಲಲ್ಲಾದರೆ 10 ಕಿಲೋಮೀಟರ್ ದೂರದಲ್ಲಿರುವ ಅರೇಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಲ್ಲವೇ ತಾಲೂಕಾ ಕೇಂದ್ರಕ್ಕೆ ಕರೆದೊಯ್ಯಬೇಕು. ಮೊಬೈಲ್ ನೆಟ್ವರ್ಕ ಸಿಗದ ದುಸ್ಥಿತಿಯಲ್ಲಿ ಯಾರನ್ನಾದರು ಸಂಪರ್ಕಿಸುವುದು ಕಷ್ಟ ಅದೆಷ್ಟೋ ಪ್ರಕರಣಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮೊಬೈಲ್ ನೆಟ್ವರ್ಕ ಹುಡುಕಿ ಅಂಬುಲೆನ್ಸ್ಗೆ ಕರೆಮಾಡಿ ಅವರು ಅಲ್ಲಿಂದ ಬಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ಹೆರಿಗೆಯಾದ ಉದಾಹರಣೆಯಿದೆ. ತೀವೃ ಆರೋಗ್ಯ ತೊಂದರೆಗೊಳಗಾದವರನ್ನಂತೂ ಜೀವ ಇರುವಾಗಲೇ ಆಸ್ಪತ್ರೆಗೆ ತಲುಪಿಸುವುದು ದುಸ್ಸಾಧ್ಯ ಎನ್ನುವ ಪರಿಸ್ಥಿತಿ ಇದೆ. ತೊಳಸಾಣಿ ಭಾಗದಲ್ಲಿ ಕನಿಷ್ಠ ಆರೋಗ್ಯ ಉಪ ಕೇಂದ್ರವನ್ನಾದರೂ ತೆರೆದು ಕುಗ್ರಾಮದ ಜನರಿಗೆ ಆರೋಗ್ಯ ಸೇವೆ ನೀಡಬೇಕು ಎನ್ನುವ ಒತ್ತಾಯ ಸಭೆಯಲ್ಲಿ ಕೇಳಿಬಂತು
ತಾಲೂಕಾ ಪಂಚಾಯತಗೆ ಒಂದುಕಡೆ ಜಿಲ್ಲಾಪಂಚಾಯತಗೆ ಇನ್ನೊಂದು ಕಡೆ ಮತ ಹಾಕುವ ಹಿರೇಬೈಲ್ ಗ್ರಾಮಸ್ಥರು
ಭಟ್ಕಳ ವಿಧಾನಸಭಾ ಕ್ಷೇತ್ರವ್ಯಾಪ್ತಿಗೊಳಪಡುವ ಚಿಕ್ಕನಕೋಡ ಪಂಚಾಯತಗೆ ಸೇರಿದ ಹಿರೇಬೈಲ್ ಗ್ರಾಮಪಂಚಾಯತ ಕಾರ್ಯಾಲಯದಿಂದ 22 ಕಿಲೋಮೀಟರ್ ದೂರದಲ್ಲಿದೆ. ಈ ಭಾಗದ ಜನರು ಜಿಲ್ಲಾಪಂಚಾಯತ ಚುನಾವಣೆಯಲ್ಲಿ ಮಾವಿನಕುರ್ವಾ ಜಿಲ್ಲಾಪಂಚಾಯತ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಿದರೆ ತಾಲೂಕಾ ಪಂಚಾಯತ ಚುನಾವಣೆಯಲ್ಲಿ ಮುಗ್ವಾ ಜಿಲ್ಲಾಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಡ್ಲೆ ತಾಲೂಕಾ ಪಂಚಾಯತ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕುವ ಅನಿವಾರ್ಯತೆಯಿದೆ. ಈ ವಿರೋದಾಭಾಸ ಯಾಕೆ ಎಂದು ಗ್ರಾಮಸ್ಥರು ಬಿಚ್ಚಿಟ್ಟ ಸಮಸ್ಯೆಗೆ ಪ್ರತಿಕ್ರಿಯಿಸಿದ ತಹಶೀಲ್ದಾರ ವಿವೇಕ ಶೇಣ್ವಿ ಕ್ಷೇತ್ರ ವಿಂಗಡಣೆಮಾಡುವಾಗ ಸರಿಪಡಿಸಿಕೊಡುವುದಾಗಿ ತಿಳಿಸಿದರು.
ಹಳ್ಳಿ ಬೇಟಿ ಹಾಗೂ ಗ್ರಾಮ ವಾಸ್ತವ್ಯ ಸಭೆಯ ಅಧ್ಯಕ್ಷತೆಯನ್ನು ತಹಶಿಲ್ದಾರ ವಿವೇಕ ಶೇಣ್ವಿ ವಹಿಸಿದ್ದರು, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಕರೀಂ ಅಸದಿ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸಪ್ಪ ಹುಳಗೋಳ, ಕೃಷಿ ಅಧಿಕಾರಿ ಪುನಿತಾ ಬಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೇಶವಮೂರ್ತಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ಸೂರ್ಯಕಾಂತ ಉಪಸ್ಥಿತರಿದ್ದರು. ಬಿ.ಆರ್.ಸಿ ಎಸ್.ಎಂ.ಹೆಗಡೆ, ಸಾಲ್ಕೋಡ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿ.ಎ.ಪಟಗಾರ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಯೋಗಾನಂದ ಸೇರಿದಂತೆ ವಿವಿಧ ಇಲಾಖೆಯ ಪ್ರಮುಖರು ಭಾಗಿಯಾಗಿದ್ದರು. ತಾಲೂಕಾ ಯುವಜನ ಕ್ರೀಡಾಧಿಕಾರಿ ಸುಧೀಶ ನಾಯ್ಕ ನಿರ್ವಹಿಸಿದರು.
Leave a Comment