ಹೊನ್ನಾವರ : ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ ಸರಕಾರ, ಶರಾವತಿ ಬಹುಗ್ರಾಮ ಯೋಜನೆಯಡಿಯಲ್ಲಿ ೧೨೮ ಕೋಟಿ ರೂಪಾಯಿ ಮಂಜೂರಿ ಪಡಿಸಿ, ೨೦೧೭ರ ಡಿಸೆಂಬರ ೬ ರಂದೇ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ಷೇತ್ರಕ್ಕೆ ಆಗಮಿಸಿ ಶಂಕುಸ್ಥಾಪನೆ ನೆರವೆರಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದ್ದಾರೆ.

ಹಿಂದಿನ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಹೊನ್ನಾವರ ಪಟ್ಟಣದಲ್ಲಿನ ನೀರಿನ ಆಹಾಕಾರವನ್ನು ಗಮನದಲ್ಲಿರಿಸಿ, ಕ್ಷೇತ್ರದ ಜನ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ತಮ್ಮ ಪ್ರಥಮ ಆದ್ಯತೆಯಲ್ಲಿ ಕುಡಿಯುವ ನೀರು ಯೋಜನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ವಿ. ದೇಶಪಾಂಡೆಯವರ ಜೊತೆ ಸತತವಾಗಿ ಚರ್ಚಿಸಿ ೨೦೧೭ರ ಮಾರ್ಚ ಬಜೆಟ್‌ನಲ್ಲಿ ಹೊನ್ನಾವರ ಪಟ್ಟಣಕ್ಕೆ ೧೨೮ ಕೋಟಿ ರೂಪಾಯಿ ವೆಚ್ಚದ ಶರಾವತಿ ಕುಡಿಯುವ ನೀರಿನ ಯೋಜನೆಗೆ ತಾಂತ್ರಿಕ ಮಂಜೂರಾತಿ ಪಡೆಯಲು ಯಶಸ್ವಿಯಾಗಿದ್ದರು ಎಂದು ತೆಂಗೇರಿ ತಿಳಿಸಿದ್ದಾರೆ.
ಆದರೂ ಇಂದಿನ ಶಾಸಕ ದಿನಕರ ಶೆಟ್ಟಿಯವರಿಗೆ ಕ್ಷೇತ್ರದಲ್ಲಿ ಮಾಡಲು ಹಲವಾರು ಕೆಲಸಗಳಿದ್ದರೂ, ಅದನ್ನು ಬಿಟ್ಟು ಹಿಂದಿನ ಸಿದ್ದರಾಮಯ್ಯ ಸರಕಾರ ತಂದ ಅನೇಕ ಯೋಜನೆಗಳಿಗೆ ತಮ್ಮ ಬಿಜೆಪಿ ಸರಕಾರದ ಮಂತ್ರಿಗಳನ್ನು ಕ್ಷೇತ್ರಕ್ಕೆ ಕರೆಯಿಸಿ, ಪುನಃ ಶಂಕು ಸ್ಥಾಪನೆ, ಉದ್ಘಾಟನೆ ಕಾರ್ಯವನ್ನು ಕ್ಷೇತ್ರದುದ್ದಕ್ಕೂ ಮಾಡುತ್ತಿರುವುದು ತೀರಾ ಖೇದಕರ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಅಷ್ಟಿದ್ದರೇ ಮುಂದಿನ ದಿನದಲ್ಲಿ ಹೊನ್ನಾವರಕ್ಕೆ ತೀರಾ ಅಗತ್ಯವಿರುವ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋವನ್ನು ತಮ್ಮ ಸರಕಾರದಲ್ಲಿ ಮಂಜೂರಿ ತರುವಂತೆ ಜಗದೀಪ ಎನ್. ತೆಂಗೇರಿ ಆಗ್ರಹಿಸಿದ್ದಾರೆ.
Leave a Comment