ಹಳಿಯಾಳ:- ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆಯೇ ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ವೇತನದಲ್ಲಿ ಹೆಚ್ಚಳವಾಗಿದೆ ಎಂದು ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘದ ರಾಜ್ಯ ಕಾರ್ಯದರ್ಶಿ ಅಶೋಕ ಮಿರಾಶಿ ಹೇಳಿದರು.
ಸುಧೀರ್ಘ 30 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತನ್ನ ಸ್ವಗ್ರಾಮಕ್ಕೆ ಮರಳಿದ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಕಾರ್ಗಿಲ್ ಯುದ್ದದಲ್ಲಿ ಭಾಗಿಯಾಗಿದ್ದ ಭೂಸೇನೆಯ ಸುಬೇದಾರ ಮುಕುಂದ ಲಕ್ಷ್ಮಣ ನಾವಲಗಿ ಅವರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಿರಾಶಿ ಅವರು ಮಾತನಾಡಿದರು.

ತೇರಗಾಂವ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮಕ್ಕೂ ಮೋದಲು ರೈಲಿನ ಮೂಲಕ ಅಳ್ನಾವರಕ್ಕೆ ಆಗಮಿಸಿದ ನಿವೃತ್ತ ಸೈನಿಕ ಮುಕುಂದ ಅವರಿಗೆ ರೈಲು ನಿಲ್ದಾಣದಲ್ಲಿಯೇ ಹಳಿಯಾಳ ಮತ್ತು ಅಳ್ನಾವರ ತಾಲೂಕಿನ ಮಾಜಿ ಸೈನಿಕರಿಂದ ಹೂಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು. ಬಳಿಕ ತೇರಗಾಂವ ಗ್ರಾಮದಲ್ಲಿ ತೇರೆದ ವಾಹನದಲ್ಲಿ ವಿಜೃಂಭಣೆಯಿಂದ ಮೇರವಣಿಗೆ ನಡೆಸುವ ಮೂಲಕ ಮಾಜಿ ಯೋಧನಿಗೆ ಅದ್ದೂರಿ ಗೌರವಪೂರ್ವಕ ಸ್ವಾಗತ ಕೊರಲಾಯಿತು. ಹಳಿಯಾಳ ತಾಲೂಕಿನ ಇತಿಹಾಸದಲ್ಲಿಯೇ ಇದು ಪ್ರಥಮ ಬಾರಿಗೆ ಮಾಜಿ ಯೋಧರಿಗೆ ಈ ಪರಿಯ ಸ್ವಾಗತ ಕೊರಲಾಗಿರುವುದು ತೇರಗಾಂವ ಗ್ರಾಮಸ್ಥರ ಕಾರ್ಯವನ್ನು ತಾಲೂಕಿನಾದ್ಯಂತ ಶ್ಲಾಘಿಸಲಾಗುತ್ತಿದೆ.
ಬಳಿಕ ತೇರಗಾಂವ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಶೋಕ ಮಿರಾಶಿ ಅವರು ಸೈನಿಕರು ನಿಯತ್ತಿನಿಂದ ಸಂಬಳಕ್ಕಾಗಿ ಮಾತ್ರ ದುಡಿಯುತ್ತಾರೆ. ಆದರೇ ದೇಶದಲ್ಲಿ ನಾಗರೀಕ ಸೇವೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿ ತಮ್ಮ ಹಲವು ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಮಾಜಿ ಸೈನಿಕರ ಬಳಿಯೇ ಮನಸೋ ಇಚ್ಚೆ ಲಂಚವನ್ನು ಪಿಕಲಾಗುತ್ತದೆ ಈ ಮೂಲಕ ಸೈನಿಕರಿಗೆ ಅಗೌರವ ನೀಡುವವರು ಇದ್ದಾರೆ ಎನ್ನುವುದು ದೌರ್ಭಾಗ್ಯದ ಸಂಗತಿಯಾಗಿದೆ ಎಂದು ಬೇಸರದಿಂದ ನುಡಿದರು.

1997 ರಲ್ಲಿ ಪಾಕಿಸ್ತಾನಿ ಉಗ್ರರೊಂದಿಗಿನ ಕಾಳಗದಲ್ಲಿ ಎಡಗಾಲಿಗೆ ಮೂರು ಹಾಗೂ ಕೈಗೆ ಒಂದು ಗುಂಡು ತಾಗಿ ಸುಮಾರು 1 ವರ್ಷ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮತ್ತೇ 27 ವರ್ಷಗಳ ಕಾಲ ಸೈನ್ಯದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಬೆಳಗಾವಿ 12 ಮರಾಠಾ ರೆಜಿಮೆಂಟ್ನ ಯೋಧ ಸುಬೇದಾರ ಮುಕುಂದ ನಾವಲಗಿ ಅವರು ಸನ್ಮಾನ, ಗೌರವ ಸ್ವೀಕರಿಸಿ ಮಾತನಾಡಿ ತಂದೆ-ತಾಯಿಯ ಆಶೀರ್ವಾದದ ಫಲವಾಗಿ ಸೈನ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದೇನೆ. ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸೈನ್ಯದಲ್ಲಿ ಸಾಕಷ್ಟು ಮಹತ್ತರ ಬದಲಾವಣೆಗಳಾಗಿದ್ದು ಇಂದು ಪ್ರತ್ಯುತ್ತರಕ್ಕಾಗಿ ಸೈನಿಕರು ಯಾವುದೇ ಪರವಾನಿಗೆ ಕೆಳುವ ಅವಶ್ಯಕತೆಯೇ ಇಲ್ಲ ಎಂದ ಅವರು ಮರಾಠಾ ರೆಜಿಮೆಂಟ್ನ ಕಾರ್ಯವನ್ನು ಶ್ಲಾಘಿಸಿದರು.
ಮುರ್ಕವಾಡ ಗ್ರಾಮದ ವಿಶ್ವನಾಥ ಶಂಭಾಜಿ ಗೌಡಾ ಮತ್ತು ಸಾತ್ನಳ್ಳಿ ಗ್ರಾಮದ ಮಾಜಿ ಯೋಧ ಮಹಾದೇವ ಯಳಗುಕರ ಅವರ ವಿಶೇಷ ಕಾಳಜಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಹಳಿಯಾಳ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಬು ಪಾಟೀಲ್, ಪ್ರಮುಖರಾದ ಸುರೇಶ ಶಿವಣ್ಣವರ, ತಾನಾಜಿ ಕೊಲೆಕರ, ವಿಶ್ವನಾಥ ಬೆಣಚೆಕರ,ತುಕಾರಾಮ ಮಿರಾಶಿ, ಸದಾನಂದ ಕಾಜಗಾರ, ದೇವಪ್ಪ, ಲಕ್ಷ್ಮಣ ನಾವಲಗಿ, ಶಾಂತಾ ನಾವಲಗಿ ಇತರರು ಇದ್ದರು.
Leave a Comment