ಹೊನ್ನಾವರ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷರಾಗಿ ಸುಧೀಶ ನಾಯ್ಕರವರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ. ಬೆಂಗಳೂರು ಆದೇಶ ಹೊರಡಿಸಿದೆ. ಬಹುಮುಖ ಪ್ರತಿಭೆಯ ಇವರು 1994 ರಿಂದ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದಲ್ಲಿ ಸಕ್ರಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. 1994 ರಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿ ತದ ನಂತರದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯ ನಿರ್ವಹಿಸಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಪ್ರಸ್ತುತ ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಸದಸ್ಯರಾದ ಇವರು ಬಹುಮುಖ ಪ್ರತಿಭಾವಂತ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ಇವರು ಉತ್ತಮ ಕ್ರೀಡಾಪಟು ಹಾಗೂ ಸಂಘಟಕರಾಗಿರುತ್ತಾರೆ. ಉತ್ತಮ ವಾಗ್ಮಿಗಳಾಗಿ ಜಿಲ್ಲೆಯ ಅನೇಕ ಸಾಹಿತ್ಯಿಕ, ಸಾಂಸ್ಕ್ರತಿಕ ಕ್ರೀಡಾಕೂಟ ಕಾರ್ಯಕ್ರಮಗಳಲ್ಲಿ ನಿರ್ವಾಹಕರಾಗಿ, ನಿರೂಪಕರಾಗಿ ಪ್ರಸಿದ್ಧರು. ತಾಲೂಕಾ ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ತಾಲೂಕಿನಾದ್ಯಂತ ಜನಪ್ರಿಯರು. ಶ್ರೀಯುತರಿಗೆ ಜಿಲ್ಲಾ ಗೌರವಾಧ್ಯಕ್ಷ ಹುದ್ದೆಯ ಅವಕಾಶದಿಂದ ಶಿಕ್ಷಕರ ಸಮೂಹದ ಅನೇಕ ಕಾರ್ಯಕ್ರಮಗಳಿಗೆ ಮೆರಗು ಬಂದಿದೆ. ಆ ಆಯ್ಕೆಯನ್ನು ಉತ್ತಮ ವ್ಯಕ್ತಿಗೆ ಸಂದ ಗೌರವವೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ.ಆರ್.ನಾಯ್ಕ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆರವರು ಅಭಿನಂದಿಸಿರುತ್ತಾರೆ. ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕ ಹಾಗೂ ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರಾದ ಆನಂದ ಗಾಂವಕರ ಹಾಗೂ ಹೊನ್ನಾವರದ ಶಿಕ್ಷಕ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.
Leave a Comment