ಹೊನ್ನಾವರ: ಶಾಸಕರ ನಡೆ ಹಳ್ಳಿಗಳ ಅಭಿವೃದ್ದಿ ಕಡೆ ಎನ್ನುವ ಶಿರ್ಷಿಕೆಯಡಿ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ತಮ್ಮ ಜನ್ಮದಿನದಂದೆ ಎರಡನೇ ಗ್ರಾಮವಾಸ್ತವ್ಯವನ್ನು ಚಿತ್ತಾರ ಗ್ರಾಮದ ಅಶಿಕೇರಿಯಲ್ಲಿ ಶನಿವಾರ ನಡೆಸಿದರು.
ಶಾಸಕರಾದ ಬಳಿಕ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿ ಅಧಿಕಾರಿಗಳ ತಂಡ ಕರೆದೊಯ್ದು ಅಲ್ಲಿಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯವನ್ನು ಕಳೆದ ಬಾರಿ ನಗರಬಸ್ತಿಕೇರಿ ಗ್ರಾಮದ ಹಾಡಗೇರಿಯಲ್ಲಿ ಯಶ್ವಸಿಯಾಗಿ ನಡೆಸಿದ್ದು, ಈ ಬಾರಿ ಚಿತ್ತಾರದ ಅಶಿಕೇರಿಯಲ್ಲಿ ತನ್ನ ಜನ್ಮದಿನದಂದೆ ತಾಲೂಕಿನ 18ಕ್ಕೂ ಹೆಚ್ಚಿನ ಅಧಿಕಾರಿಗಳೊಂದಿಗೆ ತೆರಳಿ ಸಮಸ್ಯೆ ಆಲಿಸಿದರು. ಗ್ರಾಮದ ರಸ್ತೆ, ವಿದ್ಯುತ್ ವ್ಯವಸ್ಥೆ, ಅಂಗನವಾಡಿ, ಆರೊಗ್ಯ, ಸೇರಿದಂತೆ ವಿವಿಧ ಇಲಾಖೆಯ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ವಿವರಿಸಿದಾಗ ಸ್ಪಂದಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಕಲ್ಪಿಸಿರುವುದು ವಿಶೇಷವಾಗಿತ್ತು. ಗ್ರಾಮಸ್ಥರ ಮುಖ್ಯ ಬೇಡಿಕೆಯಲ್ಲಿ ಒಂದಾದ ರಸ್ತೆ ಸಮಸ್ಯೆ ಬಗ್ಗೆ ಮಾತನಾಡಿ 5 ಕೋಟಿ ವೆಚ್ಚದಲ್ಲಿ 8 ಕಿ.ಮೀ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಲಿದ್ದು ಈ ತಿಂಗಳ ಅಂತ್ಯದೊಳಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿರುವುದು ಸಭೆಯ ವಿಶೇಷವಾಗಿತ್ತು.
ಮುಂದಿನ ವರ್ಷಂತ್ಯದೊಳಗೆ ಹೊಸ ವಿದ್ಯುತ್ ಲೈನ್ ವ್ಯವಸ್ಥೆ, 25 ಕೆವಿ ಟಿಸಿ ಬದಲಿಸಿ, 63 ಕೆ.ವಿ ಟಿಸಿ ಅಳವಡಿಕೆ, ಎಲ್ಲಾ ಮರದ ಕಂಬಗಳಿಗೆ ಮುಕ್ತಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ಶಾಲಾ ಕೊಠಡಿ ನಿರ್ಮಾಣ ಹಾಗೂ ಗ್ರಾಮದ ಶಾಲೆಯ ದುರಸ್ತಿ, ಆಟದ ಮೈದಾನ ಕುಡಿಯುವ ನೀರಿನ ಸಮಸ್ಯೆಗೆ ಕೊಳವೆಬಾವಿ ವ್ಯವಸ್ಥೆ ಒದಗಿಸಲು ಮನವಿ ಮಾಡಿದರು. ಕಳೆದ ವಿಧಾನಸಭೆ ಲೋಕಸಭೆ ಚುನಾವಣೆಯಲ್ಲಿ ಇರುವ ಮತಗಟ್ಟೆ ಗ್ರಾ.ಪಂ.ಚುನಾವಣೆಯಲ್ಲಿ ಬದಲಾಗಿದೆ. ಇದರಿಂದ ಸಮಸ್ಯೆ ಆಗಲಿದ್ದು, ಮೊದಲು ಇದ್ದ ಸ್ಥಳಕ್ಕೆ ಕಲ್ಪಿಸುವಂತೆ ಗ್ರಾಮಸ್ಥರು ಒಕ್ಕೂರಲ ಮನವಿ ಮಾಡಿದರು.
ಸರ್ಕಾರದ ಯೋಜನೆಯಲ್ಲಿ ಒಂದಾದ ಭಾಗ್ಯಲಕ್ಷ್ಮಿ ಬಾಂಡ್ ಫಲಾನುಭವಿಗಳಿಗೆ ವಿತರಿಸಲಾಯಿತು.
ನಂತರ ಶಾಸಕ ಸುನೀಲ ನಾಯ್ಕ ಮಾತನಾಡಿ ಗ್ರಾಮೀಣ ಭಾಗದ ನಾಡಿಮಿಡಿತ ಅರಿತು ಈ ಭಾಗದ ಸಮಸ್ಯೆ ಆಲಿಸಲು ಅಧಿಕಾರಗಳೊಂದಿಗೆ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದು,ಈ ಭಾಗದ ಹಲವು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದ್ದೇವೆ. ಮೂಲಭೂತ ನ್ಯಾಯಕ್ಕಾಗಿ ಬೀಳುವ ಕೊಡಲಿ ಏಟನ್ನು ತಪ್ಪಿಸುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂತಹ ಗ್ರಾಮಕ್ಕೆ ಬರಲು ಅಧಿಕಾರಿಗಳಿಗೆ ಓಂದು ದಿನವೇ ಸಮಸ್ಯೆ ಆಗಬಹುದು ಆದರೆ, ಪ್ರತಿ ಬಾರಿಯು ಸಮಸ್ಯೆ ಪರಿಹಾರಕ್ಕಾಗಿ ಕಚೇರಿಗೆ ಬರುವುದರಿಂದ, ಆ ಸಮಸ್ಯೆಯ ಅರಿಉ ಅಧಿಕಾರಿಗಳಿಗೆ ಆಗಲಿದೆ ಎಂದರು. ಜನರ ಸಮಸ್ಯೆ ಆಲಿಸುವ ತಾಳ್ಮೆ ಇರಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತಾ, ಸಾರ್ವಜನಿಕರು ಬಂದಾಗ ನಿಮ್ಮಿಂದಾಗುವ ಕೆಲಸ ಮಾಡಿಕೊಡುವಂತೆ ಸೂಚಿಸಿದರು. 5 ಕೋಟಿ ವೆಚ್ಚದಲ್ಲಿ 8 ಕೀಲೋಮೀಟರ್ ರಸ್ತೆ ಕಾಮಗಾರಿ ಮುಂದಿನ ತಿಂಗಳು ಕಾಮಗಾರಿಗೆ ಚಾಲನೆ ನೀಡುವುದಾಗಿ ವೇದಿಕೆಯಲ್ಲಿ ತಿಳಿಸಿದರು.
ವೇದಿಕೆಯಲ್ಲಿ ತಹಶೀಲ್ದಾರ ವಿವೇಕ ಶೆಣ್ವಿ, ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ ಶ್ರೀಧರ್ ಎಸ್.ಆರ್, ಕಾರ್ಯನಿರ್ವಹಣಾಧಿಕಾರಿ, ಕರೀಂ ಅಸದಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ನಾಯ್ಕ , ಕೃಷಿ ಅಧಿಕಾರಿ ಲಕ್ಷ್ಮೀ ದಳವಾಹಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ವಿರುಪಾಕ್ಷಪ್ಪ ಸಮಾಜ ಕಲ್ಯಾಣ ಇಲಾಖೆಯ ವಿನಾಯಕ ನಾಯ್ಕ, ಸಹಾಯಕ ಲೋಕೊಪಯೋಗಿ ಕಾರ್ಯನಿರ್ವಹಕ ಅಭಿಯಂತರ ಯೋಗಾನಂದ, ಮಂಕಿ ಪಿಎಸೈ ಪರಮಾನಂದ ಕೊಣ್ಣುರು, ಗ್ರಾಮದ ಮುಖಂಡ ದೇವು ಮರಾಠಿ, ಕುಂಬ್ರಿ ಮರಾಠ ಸಮಾಜದ ತಾಲೂಕ ಅಧ್ಯಕ್ಷ ರಾಮಕೃಷ್ಣ ಮರಾಠಿ, ಆಡಳಿತಾಧಿಕಾರಿ ರಾಮದಾಸ, ಹೆಸ್ಕಾಂ ರಾಮಕೃಷ್ಣ ಭಟ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಎಸ್.ಎಲ್.ನಾಯ್ಕ ,ರಾಜು ನಾಯ್ಕ, ಅಕ್ಷರದಾಸೋಹ ಸುರೇಶ ನಾಯ್ಕ, ಕೃಷ್ಣಾನಂದ, ಶಿವಾನಂದ ಮರಾಠಿ ಸೇರಿದಂತೆ ಜನಪ್ರತಿನಿಧಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ರಾಮವಾಸ್ತವ್ಯದ ಕುರಿತು ಗಣಪತಿ ನಾಯ್ಕ ಬಿಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಮಂಗಲಾ ಹೆಗಡೆ ಸ್ವಾಗತಿಸಿ, ಆರ್.ಜಿ. ಭಟ್ ವಂದಿಸಿದರು. ಉದಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕರ್ತರು ಗ್ರಾಮಸ್ಥರೊಂದಿಗೆ ವಿವಿಧ ಸಮಸ್ಯೆ ಬಗ್ಗೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಾತ್ರಿ ದೇವು ಮರಾಠಿ ಇವರ ಮನೆಯಲ್ಲಿ ವಾಸ್ತವ್ಯ ಮಾಡಿದರು.
Leave a Comment