ಹೊನ್ನಾವರ; ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ವೈದ್ಯರು ಮತ್ತು ಸಾಹಿತಿಗಳೂ ಆದ ಡಾ. ಅನುಪಮಾ.ಎಚ್.ಎಸ್ ಮಾತನಾಡಿ ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮೂಂಚೂಣಿಯಲ್ಲಿ ಬರುತ್ತಿದ್ದಾರೆ. ಆದರೆ ಇನ್ನು ನಾವು ಮಹಿಳೆಯರು ಹಕ್ಕು ಮತ್ತು ಸ್ವ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವುದು ನಿಂತಿಲ್ಲ. ಸ್ತ್ರೀ ಶೋಷಣೆ ಹಾಗೂ ಲೈಗಿಂಕ ಕಿರುಕುಳ ನಿಂತಿಲ್ಲ. ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗುವುದರ ಜೊತೆಗೆ ಪುರುಷರನ್ನು ಅವಲಂಬಿಸದೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ನಾವೆಲ್ಲ ನಮಗೆ ನಾವೇ ಕೀಳರಿಮೆಯಿಂದ ಬಳಲುತ್ತಿದ್ದೇವೆ. ಅದಕ್ಕೆ ಸಮಾಜವೂ ಕೂಡ ಕಾರಣ. ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೆಳೆಸಿದ ರೀತಿ ಮತ್ತು ಸಮಾಜ ಮಹಿಳೆಯರನ್ನು ನೋಡುವ ರೀತಿ ಬದಲಾಗಬೇಕಿದೆ. ಮಹಿಳೆಯರು ಪರಾವಲಂಬಿಗಳಾಗದೇ ಸ್ವಾವಲಂಬಿಗಳಾಗಿ ಸಮಾಜದಲ್ಲಿ ಬದುಕಿ ತೋರಿಸಬೇಕಾಗಿದೆ. ಮುಖ್ಯವಾಗಿ ಈ ಕೆಲಸ ಶಿಕ್ಷಕಿಯರಿಂದ ಆಗಬೇಕು. ನಾವು ನಮ್ಮ ಶಾಲೆಗಳಲ್ಲಿ ಪಾಠದ ಸಂದರ್ಭಲ್ಲಿ ಮಹಿಳೆಯರ ಬಗ್ಗೆ ಘನತೆ ಗೌರವವನ್ನು ಹೆಚ್ಚಿಸುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು. ಮಹಿಳಾ ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ. ಅದು ಸ್ವಾಭಿಮಾನ, ಗೌರವದ ಸಂಕೇತವಾಗಿರಬೇಕು. ಪುರುಷರು ಮಹಿಳೆಯರನ್ನು ನೋಡುವ ದೃಷ್ಟಿ ಬದಲಾಗಬೇಕು ಎಂದರು.

ಶಿಕ್ಷಕರಾದ ಉಮಾ ಬಿ ನಾಯ್ಕ, ಗಂಗಾಬಾಯಿ ಎನ್ ಭಟ್, ಫರೀದಾ ಐ ಶೇಖ್ , ಸಾವಿತ್ರಿ ಹರಿಜನ, ಮೀರ ಪಟಗಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಸಾಧನಾ ಬರ್ಗಿ ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಭಾಷಣಕ್ಕಷ್ಟೇ ಸೀಮಿತವಾಗದೇ ಮಹಿಳೆಯರನ್ನು ಗೌರವಿಸುವ, ನೆನಪಿಸುವ , ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಬೇಕು. ಇವತ್ತು ಮಹಿಳೆಯರು ಎಲ್ಲಾ ರಂಗದಲ್ಲೂ ಮುಂದುವರೆದಿದ್ದಾರೆ. ಇದಕ್ಕೆ ಪುರುಷರ ಪ್ರೋತ್ಸಾಹವೂ ಬೇಕು. ಶಿಕ್ಷಕರ ಸಂಘ ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವರಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಆನಂದ ಗಾಂವಕರ, ತಾಲೂಕಾ ಪ್ರಾಥಮಿಕ ಶಾಲ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕ, ಮಾತನಾಡಿ ಶುಭಕೋರಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷರಾದ ಸುಧೀಶ ನಾಯ್ಕ, ಕಾರ್ಯದರ್ಶಿ ಕೆ.ಎಮ್.ಹೆಗಡೆ ಉಪಸ್ಥಿತರಿದ್ದರು.
Leave a Comment