ಭಟ್ಕಳ: ಸಮಾಜದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಗುರುಸ್ಥಾನದಲ್ಲಿರುವವರಿಂದ ಸಮಾಜಕ್ಕೆ ಏನಾದರು ಸಂದೇಶ ರವಾನಯಾಗಿದ್ದಲ್ಲಿ ಅದು ಪರಿಣಾಮಕಾರಿ ಹರಡಲಿದೆ ಎಂದು ಭಟ್ಕಳ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ತಿಳಿಸಿದರು.

ಅವರು ಸೋಮವಾರದಂದು ಇಲ್ಲಿನ ಭಟ್ಕಳ ಸರಕಾರಿ ತಾಲೂಕಾಸ್ಪತ್ರೆಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಭಟ್ಕಳ ಘಟಕ, ಲಯನ್ಸ ಕ್ಲಬ್ ಮುರ್ಡೇಶ್ವರ, ತಾಲೂಕಾ ಆಸ್ಪತ್ರೆ ಭಟ್ಕಳ ಹಾಗೂ ಉಡುಪಿ ರಕ್ತನಿಧಿ ಇವರ ಜಂಟಿ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ರಕ್ತದಾನ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಜನರಲ್ಲಿ ಜಾಗೃತಿ ಮೂಡುತ್ತಿದ್ದು, ಇದು ಕೇವಲ ರಕ್ತದಾನಿಗಳಿಗೆ ಅಷ್ಟೇ ಪೂರಕವಾಗದೇ ರಕ್ತ ತುರ್ತು ಅವಶ್ಯಕತೆ ಇರುವವರಿಗೂ ಸಹಕಾರಿಯಾಗಲಿದೆ. ಸರಕಾರಿ ಆಸ್ಪತ್ರೆಯಲ್ಲಿ ವಿವಿಧ ಶಸ್ತ್ರಚಿಕಿತ್ಸೆ ವೇಳೆ ರಕ್ತದ ಅವಶ್ಯಕತೆ ಬೀಳಲಿದ್ದು ನಮ್ಮಲ್ಲಿ ಹೆಚ್ಚಿನ ರಕ್ತದಾನ ಶಿಬಿರದಿಂದ ಅದನ್ನು ಸರಕಾರಿ ಆಸ್ಪತ್ರೆಯ ರಕ್ತ ಸಂಗ್ರಹಣೆ ಕೇಂದ್ರದಲ್ಲಿ ಇರಿಸಿಕೊಳ್ಳಲಾಗುತ್ತದೆ. ಇದೇ ಸಂಧರ್ಭದಲ್ಲಿ ಉಡುಪಿಯ ರಕ್ತನಿಧಿಯಿಂದ ರಕ್ತವನ್ನು ತರಿಸಿಕೊಳ್ಳಲಿದ್ದೇವೆ. ಸದ್ಯ ಸರಕಾರಿ ಆಸ್ಪತ್ರೆಯ ಸ್ಥಿತಿ ಆಮೆಗತಿಯಲ್ಲಿ ಬೆಳವಣಿಗೆಯತ್ತ ಸಾಗುತ್ತಿದೆ. ಖಾಸಗಿ ಅವರ ಸಹಕಾರ, ಸಹಾಯದಿಂದ ಸರಕಾರಿ ಆಸ್ಪತ್ರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಚಿಂತನೆ ನಡೆಸಿದ್ದೇನೆ ಎಂದ ಅವರು ರಕ್ತದಾನದ ಬಗ್ಗೆ ಜನರಿಗೆ ಜಾಗ್ರತಿ ಮೂಡುತ್ತಿದ್ದು ಒಳ್ಳೆಯ ಸಮಾಜಮುಖಿ ಕೆಲಸದ ಪರಿಣಾಮವೂ ಮಾರಕ ರೋಗದಂತೆ ಹರಡಬೇಕು. ಇದರಿಂದ ಸಮಾಜವೂ ಏಳಿಗೆಯಾಗುವದರೊಂದಿಗೆ ಒಬ್ಬರಿಂದ ಒಬ್ಬರಿಗೆ ಸಹಾಯ ಲಭಿಸಲಿದೆ. ಹಾಗೂ ಸಮಾಜಮುಖಿ ಕೆಲಸದ ಚಿಂತನೆಯೂ ವೃದ್ಧಿಯಾಗಲಿದೆ. ಗುರುವಿನ ಸ್ಥಾನದಲ್ಲಿರುವ ಶಿಕ್ಷಕರಿಂದಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಿರುವುದು ಸಂತಸವಾಗಿದೆ. ಇವರ ಒಂದು ಸಂದೇಶ ಸಮಾಜವನ್ನೇ ಬದಲಿಸಲಿದೆ ಎಂದರು.
ಉಡುಪಿ ರಕ್ತನಿಧಿ ವೈದ್ಯಾಧಿಕಾರಿ ಡಾ. ವೀಣಾಕುಮಾರಿ ಮಾತನಾಡಿ ‘ಭಟ್ಕಳದಲ್ಲಿ ಈ ಹಿಂದೆ ವರ್ಷಕ್ಕೆ ಒಂದು ಬಾರಿ ರಕ್ತದಾನ ಶಿಬಿರ ಆಗುವುದೇ ಕಷ್ಟಕರವಾದ ಸಂಧರ್ಭದಲ್ಲಿ ಈಗ ಬದಲಾದ ದಿನದಲ್ಲಿ ತಿಂಗಳಿಗೆ ಎರಡು ಬಾರಿ ರಕ್ತದಾನ ಶಿಬಿರ ನಡೆಯುತ್ತಿದೆ. ಅದರ ಸದುಪಯೋಗವೂ ವಾಪಸ್ಸು ಇದೇ ತಾಲೂಕಿನ ಜನರಿಗೆ ಸಿಗಲಿದೆ. ರಕ್ತದಾನದ ಬಗ್ಗೆ ಜನರಲ್ಲಿ, ವಿಧ್ಯಾರ್ಥಿಗಳಲ್ಲಿ ಹೆಚ್ಚಿನ ಶಿಕ್ಷಣ ನೀಡುವ ಕಾರ್ಯ ಆಗಬೇಕು. ತಪ್ಪು ಕಲ್ಪನೆ ಮರೆತು ಒಬ್ಬರ ಜೀವ ಉಳಿಸಲು ಮುಂದಾಗಬೇಕಾಗಿದೆ ಎಂದರು.
ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮೋಹನ ನಾಯ್ಕ ಮಾತನಾಡಿ ‘ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದನೆ ಜೊತೆಗೆ ಸಮಾಜಮುಖಿ ಕಾರ್ಯ ಮಾಡುತ್ತಿರುವ ಸಂಘದ ಕೆಲಸ ಶ್ಲಾಘನೀಯ. ಈ ಜಗತ್ತಿನಲ್ಲಿ ಕೃತಕವಾಗಿ ರಕ್ತ ತಯಾರಿಕೆ ಮಾಡಲು ಅಸಾಧ್ಯವಾದ ಕಾರಣ ರಕ್ತದಾನವೊಂದೆ ಮಾರ್ಗ. ಈ ಹಿನ್ನೆಲೆ ಎಲ್ಲರು ಶ್ರೇಷ್ಠ ದಾನವಾದ ರಕ್ತದಾನದ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್ ಮುರ್ಡೇಶ್ವರದ ಅಧ್ಯಕ್ಷ ಗೌರೀಶ ನಾಯ್ಕ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊನ್ನಾವರ ಘಟಕದ ಅಧ್ಯಕ್ಷ ಎಂ.ಜಿ.ನಾಯ್ಕ, ರಾಜ್ಯ ಸರಕಾರಿ ನೌಕರರ ಸಂಘ ತಾಲೂಕಾ ಘಟಕದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಉಪಸ್ಥಿತರಿದ್ದರು.ರಕ್ತದಾನ ಶಿಬಿರದಲ್ಲಿ ಒಟ್ಟು 71 ಮಂದಿ ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ನಾಗೇಶ ಮಡಿವಾಳ ನಿರ್ವಹಿಸಿದರೆ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ. ಡಿ. ರಫೀಕ್ ಸ್ವಾಗತಿಸಿದರು. ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಪಿ. ಎ. ಗೋಮ್ಸ ವಂದಿಸಿದರು.
Leave a Comment