ಒಂದೆಡೆ ಬೆಳೆದ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಇನ್ನೊಂದೆಡೆ ಬಂದೂಕು ಲೈಸನ್ಸ್ ನವೀಕರಣಕ್ಕೆ ನೂರೊಂದು ನಿಯಮಗಳ ತೊಡಕು.. ನಡುವೆ ದಾರಿ ಕಾಣದಾದ ರೈತರು
ಹೊನ್ನಾವರ – ಹಂದಿ, ಮಂಗ, ಕಡವೆ ಮುಂತಾದ ಕಾಡು ಪ್ರಾಣಿಗಳನ್ನು ಬೆದರಿಸಿ ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಬಂದೂಕು ಹೊಂದಲು ರೈತರಿಗೆ ಅವಕಾಶವಿದೆಯಾದರೂ ಪದೇ ಪದೇ ಎದುರಾಗುವ ಚುನಾವಣೆಯ ಕಾರಣದಿಂದ ಬಂದೂಕು ರೈತರ ಬಳಿ ಇರುವುದಕ್ಕಿಂದ ಪೊಲೀಸ್ ಠಾಣೆಯಲ್ಲಿ ಇರುವ ಅವಧಿಯೇ ಹೆಚ್ಚು ಎನ್ನುವ ಗೊಣಗಾಟ ಕೇಳಿಬರುತ್ತಿದೆ.

ವನ್ಯ ಜೀವಿ ಸಂರಕ್ಷಣಾ ಖಾಯಿದೆ ಜಾರಿಯಾದ ನಂತರ ಕಾಡು ಪ್ರಾಣಿಗಳನ್ನು ಪಕ್ಷಿಗಳನ್ನು ಬೇಟೆಯಾಡುವುದು ಶಿಕ್ಷಾರ್ಹ ಅಪರಾಧವೆನಿಸಿಕೊಂಡಿದೆ. ಆದರೆ ಕಾಡು ಪ್ರಾಣಿ ಹಾಗೂ ಪಕ್ಷಿಗಳಿಂದ ರೈತರು ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಬಂದೂಕು ಅತೀ ಅಗತ್ಯ ಎನ್ನುವುದು ಹಲವು ರೈತರ ಅಭಿಪ್ರಾಯ. ಬಂದೂಕು ಇದ್ದ ಮಾತ್ರಕ್ಕೆ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಲೇ ಬೇಕು ಎನ್ನುವುದೇನು ಇಲ್ಲ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕವೂ ಕಾಡು ಪ್ರಾಣಿಗಳನ್ನು ಓಡಿಸಬಹುದು, ಅದರಲ್ಲಿಯೂ ಮರದಿಂದ ಮರಕ್ಕೆ ಹಾರುವ ಮಂಗಗಳಿಗೆ ಯಾವ ಬೇಲಿಗಳು ಲೆಕ್ಕಕ್ಕೆ ಬರುವುದಿಲ್ಲ. ಬಂದೂಕು ಇದ್ದರೆ ಮಾತ್ರ ಅವುಗಳನ್ನು ಹೆದರಿಸಬಹುದು.
ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯೊಂದರಲ್ಲಿಯೇ 423 ಲೈಸನ್ಸ್ ಇರುವ ಬಂದೂಕು ಇದೆ ಎನ್ನುವ ಮಾಹಿತಿ ಇದೆ. ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಲೈಸನ್ಸ್ ಇರುವ ಬಂದೂಕುಗಳನ್ನು ಪೊಲೀಸ್ ಇಲಾಖೆಗೆ ಸರಂಡರ್ ಮಾಡಿ ಚುನಾವಣೆ ಮುಗಿದ ನಂತರ ವಾಪಸ್ಸು ಪಡೆದಕೊಳ್ಳಬೇಕು. ಬಂದೂಕುಗಳ ಲೈಸನ್ಸ್ ಅನ್ನು ನವೀಕರಿಸಿಕೊಳ್ಳುವುದೂ ಸುಲಭವಲ್ಲ ತಂದೆಯ ಹೆಸರಿನಲ್ಲಿರುವ ಬಂದೂಕನ್ನು ಮಗನ ಹೆಸರಿಗೆ ವರ್ಗಾಯಿಸಿಕೊಳ್ಳುವುದೂ ಕ್ಲಿಷ್ಟಕರವಾಗಿ ಪರಿಣಮಿಸಿದೆ. ವಯಸ್ಸಿನ ದೃಢೀಕರಣ ಪ್ರಮಾಣಪತ್ರ, ಆರೋಗ್ಯವಂತರಾಗಿದ್ದಾರೆನ್ನುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ, ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಿರುವ ಬಗ್ಗೆ ಪೊಲೀಸ್ ಇಲಾಖೆಯ ದೃಢೀಕರಣಗಳನ್ನು ಪೂರೈಸಿಯೂ ಲೈಸನ್ಸ್ ನವೀಕರಣ ಸಾಧ್ಯವಾಗದ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ.
ಅಭಯಾರಣ್ಯದ ಅಡಕತ್ತರಿ
ಬಂದೂಕು ಲೈಸನ್ಸ್ ನವೀಕರಣಕ್ಕೆ ಜಿಲ್ಲಾಡಳಿತ ಕೆಲ ನಿಯಮಗಳನ್ನು ವಿಧಿಸಿದೆ, ನಿಯಮಾವಳಿಗಳಲ್ಲಿ ಪ್ರಮುಖವಾದುದು ಅರಣ್ಯ ಇಲಾಖೆಯಿಂದ ಪಡೆಯಬೇಕಾದ ಕ್ಲಿಯರೆನ್ಸ್ ಸರ್ಟಿಪಿಕೇಟ್. ತಾಲೂಕಿನ ಬಹುಭಾಗ ಉದ್ದೇಶಿತ ಅಭಯಾರಣ್ಯ ವ್ಯಾಪ್ತಿಗೆ ಒಳಪಡುವ ಕಾರಣ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದುಕೊಳ್ಳುವುದು ಸುಲಭವಲ್ಲ, ( ಹೆಚ್ಚಿನ ಸಂದರ್ಭಗಳಲ್ಲಿ ಕೊಡುವುದೇ ಇಲ್ಲ) ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಇಲ್ಲದೇ ಬಂದೂಕು ಲೈಸನ್ಸ್ ನವೀಕರಣವಾಗುವುದಿಲ್ಲ ಬೆಳೆಯ ರಕ್ಷಣೆಗೆ ನೀಡಿದ ಬಂದೂಕು ಪೊಲೀಸ್ ಠಾಣೆಯಲ್ಲಿ ಕೊಳೆಯುತ್ತಿದ್ದರೆ ಪ್ರಯೋಜನವೇನು ಎನ್ನುವುದು ರೈತರ ಪ್ರಶ್ನೆಯಾಗಿದೆ.
ಫಸಲು ಕೈಗೆ ಬರುವ ಸಮಯದಲ್ಲಿ ಹೊಲ ಗದ್ದೆಗಳಲ್ಲಿ ಪ್ರಾಣಿ ಪಕ್ಷಿಗಳ ಹಾವಳಿ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ಬಂದೂಕಿನ ಅವಶ್ಯಕತೆ ಹೆಚ್ಚಿರುತ್ತದೆ ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಯಸ್ಸಾದ ತಂದೆಯ ಹೆಸರಿನಲ್ಲಿರುವ ಬಂದೂಕು ಲೈಸನ್ಸ್‍ನ್ನು ಮಗನ ಹೆಸರಿಗೆ ವರ್ಗಾಯಿಸಿಕೊಳ್ಳುವುದೂ ಸಾಧ್ಯವಾಗದೇ ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿ ಬಂದೂಕು ಲೈಸನ್ಸ್ ನವೀಕರಣಕ್ಕೆ ಮತ್ತು ವರ್ಗಾವಣೆಗೆ ಅನುಕೂಲಮಾಡಿಕೊಡಬೇಕಾದ ಅಗತ್ಯವಿದೆ – ಶ್ರೀಪಾದ ಶೆಟ್ಟಿ, ಜಲವಳ್ಳಿ
Leave a Comment