ಹೊನ್ನಾವರ – ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಸುಗ್ಗಿಯ ಸೊಬಗು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಾಲಕ್ಕಿ, ಹರಿಜನ, ನಾಮಧಾರಿಗಳು ಸೇರಿದಂತೆ ಜಿಲ್ಲೆಯ ಬಹುದೊಡ್ಡ ಶ್ರಮಿಕ ವರ್ಗ ಸುಗ್ಗಿಯ ಆಚರಣೆಯಲ್ಲಿ ಮೈಮರೆಯುತ್ತದೆಯಾದರೂ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ನಗರೆಯ ನಾಮಧಾರಿಗಳ ಸುಗ್ಗಿ ಮಾತ್ರ ತನ್ನ ಕಟ್ಟುಪಾಡು, ಶಿಸ್ತು, ಆಚರಣೆಯಲ್ಲಿನ ನಂಬಿಕೆಯಿಂದ ಇತರೆಲ್ಲರಿಗಿಂತ ವಿಭಿನ್ನವಾಗಿ ಗಮನಸೆಳೆಯುತ್ತಿದೆ.

ನಗರೆಯ ನಾಮಧಾರಿಗಳ ಸುಗ್ಗಿ ಇತರರಿಗಿಂತ ವಿಭಿನ್ನ ಎನ್ನುವುದಕ್ಕೆ ಹಲವು ಕಾರಣಗಳು ಇದೆಯಾದರೂ ಅತ್ಯಂತ ಪ್ರಮುಖವಾದ ಕಾರಣ ಇಲ್ಲಿನವರದು ಎಲ್ಲರಂತೆ ಹೊಯ್ಗೋಲ ( ಎರಡೂ ಕೈಯಲ್ಲಿರುವ ಕೋಲನ್ನು ಹೊಡೆಯುವುದು) ಸುಗ್ಗಿ ಕುಣಿತವಲ್ಲ. ಇವರೂ ಎಲ್ಲರಂತೆ ಎರಡೂ ಕೈಯಲ್ಲಿ ಕೋಲನ್ನು ಹಿಡಿದಿರುತ್ತಾರಾದರೂ ಯಾವುದೇ ಸಂದರ್ಭದಲ್ಲೂ ಬಲಗೈಯಲ್ಲಿರುವ ಕೋಲನ್ನು ಸಹವರ್ತಿಗಳ ಕೋಲಿಗೆ ಹೊಡೆಯುವುದಿಲ್ಲ. ಎಡಗೈ ಕೋಲನ್ನು ಮಾತ್ರ ಹೊಡೆಯುವ ಇವರ ಆಚರಣೆಯನ್ನು ಬಿಚ್ಚುಗೋಲ ಸುಗ್ಗಿ ಎಂದೇ ಕರೆಯುತ್ತಾರೆ.
ಕಾಲಕ್ಕೆ ತಕ್ಕಂತೆ ಇತರೆಡೆಗಳಲ್ಲಿ ಸುಗ್ಗಿ ಆಚರಣೆಯಲ್ಲಿಯೂ ಸಾಕಷ್ಟು ಬದಲಾವಣೆಗಳು ಆಗಿವೆಯಾದರೂ ನಗರೆಯವರು ಮಾತ್ರ ತಮ್ಮ ಪೂರ್ವಿಕರಿಂದ ಬಂದ ಸಂಪ್ರದಾಯದ ಕಟ್ಟುಪಾಡುಗಳನ್ನು ಮುರಿದಿಲ್ಲ. ಆದರೆ ಇವರು ಪ್ರತೀ ವರ್ಷ ಸುಗ್ಗಿಯನ್ನು ಆಚರಿಸುವುದಿಲ್ಲ. ಐದು ವರ್ಷಕ್ಕೊಮ್ಮೆ ಸುಗ್ಗಿ ಕಟ್ಟುವ ಮಂದಿ 7 ದಿನ ಇಲ್ಲವೇ ಐದು ದಿನ ತುರಾಯಿ ಕಟ್ಟಿಕೊಂಡು ಹಾಡು ಹೇಳುತ್ತಾ ಮನೆ ಮನೆಗೆ ಹೋಗಿ ಕುಣಿದು ಸಂತಸ ಹಂಚುತ್ತಾರೆ.

ಕೋಲು ಭಾಗುವುದು
ಊರಿನ ನಡುವೆ ಇರುವ ಕಾಮನ ಕಟ್ಟೆಯಲ್ಲಿ ಪೂಜೆ ಸಲ್ಲಿಸಿದ ನಂತರವಷ್ಟೇ ತುರಾಯಿ ಕಟ್ಟಬೇಕು. ಅದರಲ್ಲೂ ಮದುವೆಯಂತ ಶುಭ ಕಾರ್ಯದಲ್ಲಿ ಮಾಡುವ ಎಲ್ಲಾ ಆಚರಣೆಗಳನ್ನೂ ಸುಗ್ಗಿ ಕಟ್ಟುವಾಗಲೂ ಪಾಲಿಸುತ್ತಾರೆ. ಪೂಜಾರಿ ಮನೆಯವರು ಕಾಮನಕಟ್ಟೆಯಲ್ಲಿ ಪೂಜೆ ಸಲ್ಲಿಸಿದ ನಂತರ ಮಂಡಲ ಮನೆಗೆ ಬಂದು ವಿಶೇಷವಾಗಿ ಸಿಂಗರಿಸಿದ ತುರಾಯಿಗಳನ್ನು ಕಟ್ಟಲಾಗುತ್ತದೆ. ಹಾಡು ಹೇಳಿ ಕುಣಿಸುವ ಮನೆತನವನ್ನು ಬ್ಯಾಡಗಿ ಹಾಡುವವರು ಎಂದೇ ಗುರುತಿಸುತ್ತಾರೆ. ಸುಗ್ಗಿ ಕುಣಿಯುವಾಗ ಯಾರಾದರೂ ಒಬ್ಬನ ಕೈಯಿಂದ ಕೋಲು ಜಾರಿ ನೆಲಕ್ಕೆ ಬಿದ್ದರೆ ಅಥವಾ ಕೋಲನ್ನು ಹೊಡೆಯುವಾಗ ತಪ್ಪಿ ಕೈಗೆ ಹೊಡೆದರೆ ಸಾವರಿಸಿಕೊಂಡು ಮುಂದೆ ಸಾಗುವುದಿಲ್ಲ, ಅಲ್ಲಿಗೆ ಹಾಡು ನಿಲ್ಲಿಸಿ ಕೊಡಿಬಾಳೆಯಮೇಲೆ ಕೋಲನ್ನಿಟ್ಟು ಪೂಜೆಮಾಡಿ ನಮಸ್ಕರಿಸಿ ಬೆನ್ನು ಬಾಗಿ ಕೋಲನ್ನು ಎತ್ತಿಕೊಂಡು ಕುಣಿತ ಮುಂದುವರಿಸುತ್ತಾರೆ.

ಕಾಮನಕಟ್ಟೆಗೆ ಪೂಜೆ ಸಲ್ಲಿಸಿ ಮಂಡಲ ಮನೆಯಲ್ಲಿ ತುರಾಯಿ ಕಟ್ಟಿದವರು ಸೀದಾ ಗ್ರಾಮದೇವರಾದ ಮುಗ್ವಾ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿ ಅಲ್ಲಿ ಕುಣಿದು ನಂತರ ಶ್ವೇತಾಂಬಿಕಾ ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ನಂತರವಷ್ಟೇ ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ಪ್ರತೀ ದಿನ ಮಧ್ಯಾಹ್ನ 3 ಗಂಟೆಗೆ ತುರಾಯಿ ಕಟ್ಟಿ ಹೊರಡುವ ತಂಡ ಮಧ್ಯರಾತ್ರಿವರೆಗೂ ಕೆಲವೊಮ್ಮೆ ಬೆಳಗಿನಜಾವದ ವರೆಗೂ ದಣಿವರಿಯದೇ ಕುಣಿಯುತ್ತಾರೆ.

[ಮಾಘ ಮಾಸದಲ್ಲಿ ಭಜನಾ ಹಬ್ಬವನ್ನಾಚರಿಸಿದ ನಂತರ .ಶಿವರಾತ್ರಿಯ ಶುಭದಿನದಂದು ಮಂಡಲ ಮನೆಯಲ್ಲಿರುವ ಕೋಲನ್ನು ಹೊರ ತೆಗೆಯುತ್ತಾರೆ. ನಂತರ ನಿತ್ಯವೂ ಸಂಜೆ ಹೊತ್ತು ಸುಗ್ಗಿ ಕುಣಿತದ ಅಭ್ಯಾಸವನ್ನು ಆರಂಭಿಸುತ್ತಾರೆ. ]
[ಪೂಜಾರಿ ಮನೆ, ಮಂಡಲಮನೆ, ಬ್ಯಾಡಗಿ ಹಾಡುವವರ ಮನೆ, ಕೋಲುಭಾಗುವವರ ಮನೆಯವರು, ಸುಬ್ರಹ್ಮಣ್ಯ ನಾಮಧಾರಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ನೇತೃತ್ವದಲ್ಲಿ ಸುಗ್ಗಿ ಕುಣಿತ ನಡೆಯುತ್ತದೆ. ಇವರೇ ಸುಗ್ಗಿ ಕುಣಿತದ ಬಗ್ಗೆ ಸಮಾಜದ ಮುಂದಿನ ಪೀಳಿಗೆಯವರಿಗೆ ಹೇಳಿಕೊಡುತ್ತಾರಾದರೂ ಯಾವುದೇ ಸಂದರ್ಭದಲ್ಲೂ ಹೊರಗಿನವರಿಗೆ ಕಲಿಸಿಕೊಡುವುದಿಲ್ಲ. ಕನಿಷ್ಠ 15 -20 ವರ್ಷ ನಗರೆಯಲ್ಲಿ ವಾಸವಿದ್ದು ಇಲ್ಲಿನ ಆಚಾರಾ ವಿಚಾರಗಳನ್ನು ಒಪ್ಪಿಕೊಂಡು ಸಮಾಜದೊಂದಿಗೆ ಹೊಂದಿಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ಸಮಾಜದ ಹಿರಿಯರಿಗೆ ಬಂದರೆ ಮಾತ್ರ ಸುಗ್ಗಿ ಕುಣಿತದ ಪಟ್ಟುಗಳನ್ನು ಕಲಿಸುತ್ತಾರೆ. ]
ನಗರೆಯ ನಾಮಧಾರಿಗಳ ಸುಗ್ಗಿ ಕುಣಿತಕ್ಕೆ ಶತ ಶತಮಾನಗಳ ಇತಿಹಾಸವಿದೆ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆಗೆ ಎಲ್ಲಿಯೂ ಚ್ಯುತಿ ಬಾರದಂತೆ ಪಾಲಿಸಿಕೊಂಡು ಬರುತ್ತಿದ್ದೇವೆ. ಸುಗ್ಗಿ ಕಟ್ಟುವುದಕ್ಕೆ ಕನಿಷ್ಠ 16 ಮಂದಿ ಬೇಕೇ ಬೇಕು. ಆದರೆ ಉದ್ಯೋಗ ನಿಮಿತ್ತ ಯುವಕರೆಲ್ಲಾ ಬೇರೆ ಬೇರೆ ಊರಿನಲ್ಲಿರುವ ಕಾರಣ ಪ್ರತೀ ವರ್ಷದ ಬದಲು ಐದಾರು ವರ್ಷಕ್ಕೊಮ್ಮೆ ಆಚರಣೆ ಮಾಡುತ್ತೇವೆ. – ದೇವಪ್ಪ ನಾಯ್ಕ, ನಾಮಧಾರಿ ಸಮಾಜದ ಪ್ರಮುಖರು
Leave a Comment