ಹೊನ್ನಾವರ; ತಾಲೂಕಿನ ಹೆಸ್ಕಾಂಗೆ ಸಂಭಂದಪಟ್ಟ ಗೇರುಸೊಪ್ಪ ವಲಯವ್ಯಾಪ್ತಿಯಲ್ಲಿ ಜನರು ಪ್ರತಿ ನಿತ್ಯ ವಿದ್ಯುತ್ ಅವ್ಯವಸ್ಥೆಯ ಆಗರವಾಗಿದೆ ಎಂದು ಸ್ಪಂದನ ಸಮಾಜ ಸೇವಾ ಬಳಗ ಚಂದ್ರಕಾಂತ ಕೋಚಡೇಕರ್ ಆರೊಪಿಸಿದ್ದಾರೆ. ಗೇರುಸೋಪ್ಪಾ ಸಮೀಪದ ಗ್ರಾಮದಲ್ಲಿ ರೈತರಿಗೆ 3ಫೇಸ್ ವಿದ್ಯುತ್ ಕನಸಿನ ಮಾತಾಗಿದೆ .
ಗ್ರಹ ಬಳಕೆ ವಿದ್ಯುತ್ ಅವ್ಯವಸ್ಥೆಯ ಆಗರವಾಗಿದೆ. ದೀಪದ ಬುಡದಲ್ಲಿ ಕತ್ತಲೆ ಎನ್ನುವಂತೆ ನಾಡಿಗೆ ಜಲವಿದ್ಯುತ್ ಯೋಜನೆ ನೀಡಿದರೂ ಶರಾವತಿ ನದಿ ಪಾತ್ರದ ಜನರು ಕತ್ತಲೆಯಲ್ಲಿ ದಿನ ದೂಡುವಂತಾದದ್ದು ವಿಪರ್ಯಾಸವೇ ಸರಿಯಾಗಿದೆ. ಸಮಸ್ಯೆ ಬಗೆಹರಿಸುವಂತೆ ಇಲ್ಲಿಯ ಜನರು ಹೆಸ್ಕಾಂ ಕಛೇರಿಯನ್ನು ಸಂಪರ್ಕಿಸಿದರೆ ಹೆಚ್ಚಿನ ಸಂದರ್ಭದಲ್ಲಿ ಅಲ್ಲಿನ ದೂರವಾಣಿಯ ಸಂಪರ್ಕಸಿಗದಂತೆ ಎತ್ತಿಡುವ ಹೊಸ ವಿಧಾನವನ್ನು ಹೆಸ್ಕಾಂನವರು ಕೊಂಡುಕೊಂಡಿದ್ದಾರೆ. ಒಂದು ವೇಳೆ ಮೊಬೈಲ ದೂರವಾಣಿಯಲ್ಲಿ ಸಂಪರ್ಕ ಸಾಧ್ಯವಾದರೆ ಮೇನ್ ಲೈನ್ ಫಾಲ್ಟ್ ಎನ್ನುವ ಸಿದ್ಧ ಉತ್ತರವಂತೂ ಖಂಡಿತಾ ದೊರೆಯುತ್ತದೆ. ಗೇರುಸೊಪ್ಪ ಹೆಸ್ಕಾಂ ವಲಯದ ಶರಾವತಿ ಬಲದಂಡೆ ಪ್ರದೇಶ (ಗೇರುಸೊಪ್ಪದಿಂದ ಉಪ್ಪೋಣಿ, ಹೆರಂಗಡಿ, ಅಳ್ಳಂಕಿ,ಮೂಡ್ಕಣಿ,ಜಲವಳ್ಳಿ ವರೆಗೆ) ಪಂಚಾಯತ ವಾಪ್ತಿಯಲ್ಲಿ ವಿದ್ಯುತ್ ಅವ್ಯವಸ್ಥೆ ಹೇಳತೀರದಷ್ಟಿದ್ದು ಇದನ್ನು ಸರಿಪಡಿಸಲು ಹೆಸ್ಕಾಂ ಇಚ್ಛಾಶಕ್ತಿಯನ್ನು ತೋರಿಸುತ್ತಿಲ್ಲ. ಈ ಭಾಗದ ಈ ಪ್ರಮುಖ ಸಮಸ್ಯೆಯನ್ನು ಬಗೆಹರಿಸಲು ಜನಪ್ರತಿನಿಧಿಗಳಿಗೆ ಪುರಸೊತ್ತು ಆಗಿಲ್ಲವೋ ಅಥವಾ ಅವರ ಗಮನಕ್ಕೆ ಬಂದಿಲ್ಲವೋ ಎನ್ನುವ ಜಿಜ್ಞಾಸೆಯಲ್ಲಿರುವ ಜನರು ಹೆಸ್ಕಾಂ ವಿರುದ್ಧ ಹೋರಾಟಕ್ಕೆ ಇಳಿಯುವ ಚಿಂತನೆ ಮಾಡುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಈ ವಿಚಾರದಲ್ಲಿ ಹೆಸ್ಕಾಂ ಕೂಡಲೇ ಮಧ್ಯ ಪ್ರವೇಶಿಸಿ ಈ ಭಾಗದ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ಮುಂದಿನ ಒಂದು ವಾರದಲ್ಲಿ ಸಮಾನ ಮನಸ್ಕರೆಲ್ಲರೂ ಒಂದಾಗಿ ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕುವಂತಹ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
Leave a Comment