ಹೊನ್ನಾವರ: ಮಾರ್ಚ 31ರಂದು ಸೇವಾ ನಿವೃತರಾದ ಇರ್ವರು ಶಿಕ್ಷಕಿಯರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
22 ವರ್ಷದಿಂದ ಕಬಾಡಕೇರಿ ಶಾಲೆಯ ಶಿಕ್ಷಕಿಯಾಗಿದ್ದ ಕಲಾವತಿ ಭಟ್ ಹಾಗೂ 36 ವರ್ಷಗಳ ಕಾಲ ರಾಮೇಶ್ವರ ಕಂಬಿ ಶಾಲೆಯ ಶಿಕ್ಷಕರಾಗಿದ್ದ ಪ್ರೇಮಾ ಹೆಗಡೆ ಸೇವಾ ಅವಧಿಯಲ್ಲಿ ನೀಡಿದ ಸೇವೆ ಗುರುತಿಸಿ ಗೌರವಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಸವಿತಾ ನಾಯ್ಕ ಸಂಘದ ಈ ಕಾರ್ಯವನ್ನು ಅತ್ಯಂತ ಅಭಿಮಾನಪೂರ್ವಕವಾಗಿ ಶ್ಲಾಘಿಸಿ, ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ,ಒಬ್ಬ ಶಿಕ್ಷಕನಿಗೆ ತನ್ನ ವೃತ್ತಿಜೀವನದ ಕೊನೆಯ ದಿನ ಅತ್ಯಂತ ಭಾವನಾತ್ಮಕವಾಗಿರುತ್ತದೆ, ಕೊನೆಯ ಕ್ಷಣದಲ್ಲಿ ಪ್ರೀತಿಯಿಂದ ಮಾತನಾಡಿ ಶುಭ ಹಾರೈಸಿ ಅವರನ್ನು ಸನ್ಮಾನಿಸಿದ ಕ್ಷಣ ಎಲ್ಲಕ್ಕಿಂತ ಮಿಗಿಲಾದುದು. ಸಂಘದ ಈ ಕಾರ್ಯ ಪ್ರಶಂಸನೀಯ ಇದನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ ನಮ್ಮದು ಶಿಕ್ಷಕರ ಕುಟುಂಬ ನಮ್ಮ ಕುಟುಂಬ ಸದಸ್ಯರು ವೃತ್ತಿಯಿಂದ ನಿವೃತ್ತರಾದ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ಪ್ರೀತಿಯಿಂದ ಮಾತನಾಡಿ ಸನ್ಮಾನಿಸಿ ಶುಭ ಹಾರೈಸಿ ಬೀಳ್ಕೊಡುವುದು ನಮ್ಮ ಸಂಪ್ರದಾಯ. ನಮ್ಮ ನೂತನ ಸಂಘ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಈ ಕಾರ್ಯಕ್ರಮ ಅಳವಡಿಸಿಕೊಂಡು ನಮ್ಮ ಶಿಕ್ಷಕರು ನಿವೃತ್ತರಾಗುವ ದಿವಸ ಅವರಿದ್ದಲ್ಲಿಗೆ ತೆರಳಿ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಸಿ.ಆರ್.ಪಿ.ಗಳು, ಶಿಕ್ಷಣ ಸಂಯೋಜಕರು ಉಪಸ್ಥಿತರಿದ್ದರು.
Leave a Comment