ಹೊನ್ನಾವರ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.
2004ರಲ್ಲಿ ಘಟಿಸಿದ್ದ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಶಿವಕುಮಾರ ಆದಿಮೂಲಂ ಎನ್ನುವವನಿಗೆ ಜೆಎಮ್ಎಫ್ಸಿ ನ್ಯಾಯಾಲಯ 2005ರಂದು 3 ತಿಂಗಳು ಜೈಲು ಶಿಕ್ಷೆ ಹಾಗೂ ರೂ.500 ದಂಡ ವಿಧಿಸಿತ್ತು. ಆದರೂ ಸಹ ದಸ್ತಗಿರಿಗೆ ಸಿಗದೇ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿಯನ್ನು ಬೆಂಗಳೂರಿನ ಬಾಗಲೂರುದಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಆದೇಶದ ಮೇರೆಗೆ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀಧರ್ ಎಸ್.ಆರ್. ನೇತೃತ್ವದಲ್ಲಿ ಠಾಣೆಯ ಪಿಎಸ್ಐ ಶಶಿಕುಮಾರ, ಅಪರಾಧ ವಿಭಾಗದ ಪಿಎಸ್ಐ ಸಾವಿತ್ರಿ ನಾಯಕ, ಎ.ಎಸ್.ಐ ನಾರಾಯಣ ಗೌಡ, ಸಿಬ್ಬಂದಿ ಮಂಜುನಾಥ ಯಲ್ವಾಡಿಕಾವೂರ್, ಕೃಷ್ಣಾ ಗೌಡ ಇವರುಗಳ ತಂಡ ಶಿಕ್ಷಿತ ಅಪರಾಧಿಯನ್ನು ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಪತ್ತೆ ಕಾರ್ಯ ಕೈಗೊಂಡ ತಂಡದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಭಿನಂದಿಸಿದ್ದಾರೆ.
Leave a Comment