ಹೊನ್ನಾವರ : ಕಳೆದೊಂದು ವಾರದಿಂದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿಯ ಜನತಾ ಕಾಲೋನಿಯಲ್ಲಿ ರಾತ್ರಿ ೯ ಆಗುತ್ತಲೇ ಕರೆಂಟ್ ಸ್ಥಗಿತವಾಗುವ ವಿಚಿತ್ರ ಬೆಳವಣಿಗೆ ನಡೆಯುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮಿತಿ ಮೀರುತ್ತಿರುವ ಕೊರೊನಾ ಕೇಸ್ಗಳು ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಜನರನ್ನು ಭಯಭೀತಗೊಳಿಸುತ್ತಿವೆ. ಹಾಗಂತ ಕರಾವಳಿಯಲ್ಲಿ ಮೇ ತಿಂಗಳ ಬಿಸಿಲು ಜನರಿಗೆ ಮನೆಯೊಳಗೆ ಕುಳಿತುಕೊಡುವುದಕ್ಕೂ ಬಿಡುವುದಿಲ್ಲ. ಹೇಳಿ ಕೇಳಿ ಮಂಕಿ ಸಮುದ್ರ ತೀರವನ್ನು ಹೊಂದಿರುವ ಕಲ್ಲರೆಗಳೇ ಹೆಚ್ಚಿರುವ ಪ್ರದೇಶವಾಗಿದೆ. ಈ ಭಾಗದಲ್ಲಿ ಹಗಲಲ್ಲಿ ಕಾದ ಕಾವಲಿಯಾಗುವ ನೆಲ ರಾತ್ರಿಯೂ ತಣ್ಣಗಾಗುವುದಿಲ್ಲ. ಉಸಿರಾಡುವುದಕ್ಕೂ ಬಿಸಿ ಹವೆಯೇ ಅನಿವಾರ್ಯ. ಬೇಸಿಗೆಯದಿನಗಳಲ್ಲಿ ಮನೆಯೊಳಗೆ ಕುಳಿತುಕೊಳ್ಳಬೇಕು ಎಂದರೆ ಫ್ಯಾನ್ ತಿರುಗಲೇ ಬೇಕು ಇಲ್ಲವಾದರೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ.
ಪರಿಸ್ಥಿತಿ ಹೀಗಿದ್ದರೂ ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ರಾತ್ರಿಯಾಗುತ್ತಲೇ ಕರೆಂಟ್ ಮಾಯವಾಗುತ್ತಿದೆ. ಕೆ.ಇ.ಬಿ ಯವರಿಗೆ ಕರೆಮಾಡಿದರೆ ನಮ್ಮಿಂದ ಯಾವುದೇ ಸಮಸ್ಯೆಯಿಲ್ಲ ಎನ್ನುವ ಉತ್ತರ ಕಾಮನ್ಆಗಿಯೇ ಬರುತ್ತಿದೆ. ಹಾಗಾದರೆ ಏನಾಗಿದೆ ಎಂದು ನೋಡಲು ಹೋದರೆ ಜನತಾ ಕಾಲನಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟ್ರಾನ್ಸಾ÷್ಫರ್ಮರ್ ಬಳಿ ಇರುವ ಪ್ಯೂಸ್ನ್ನು ನಿತ್ಯವೂ ಯಾರೋ ಕಿತ್ತು ಹಾಕುತ್ತಿದ್ದಾರೆ ಎನ್ನಲಾಗಿದೆ.
ಪ್ಯೂಸ್ ತೆಗೆಯುವ ಕಾಣದ ಕೈಗಳು
ಹೊತ್ತಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವ ಕೆಲವರಿಗೆ ಜನತಾ ಕಾಲೋನಿ ಮಾರ್ಗವನ್ನು ಬಳಸುವುದು ಅನಿವಾರ್ಯವೂ ಅನುಕೂಲವೂ ಹೌದು ಎನ್ನುವ ಅಭಿಪ್ರಾಯವಿದೆ. ಇನ್ನು ಜನತಾ ಕಾಲೋನಿಯಲ್ಲಿ ಯಾರದಾದರೂ ಮನೆಯಲ್ಲಿ ಸಿ.ಸಿ.ಕ್ಯಾಮರಾ ಇಟ್ಟಿದ್ದರೆ ಎಲ್ಲರ ಕಳ್ಳ ದಂಧೆಯೂ ಹೊರಗೆ ಬರುತ್ತದೆ ಎನ್ನುವ ಕಾರಣಕ್ಕೆ ಟ್ರಾನ್ಸ್ಪಾರ್ಮರ್ ಬಳಿ ಪ್ಯೂಸ್ ತೆಗೆದು ಇಡೀ ಊರನ್ನು ಕತ್ತಲೆಯಲ್ಲಿಟ್ಟು ತಮ್ಮ ಅಕ್ರಮ ದಂಧೆಯನ್ನು ಸರಾಗವಾಗಿಸಿಕೊಳ್ಳುತ್ತಾರೆ ಎನ್ನುವ ಆರೋಪವಿದೆ. ಮಂಕಿ ಪೊಲೀಸ್ ಠಾಣೆಯಿಂದ ಅನತಿದೂರದಲ್ಲಿರುವ ಜನತಾ ಕಾಲೋನಿಯಲ್ಲಿ ಈ ರೀತಿ ನಡೆಯುತ್ತಿದ್ದರೂ ಪೊಲೀಸರು ಅಕ್ರಮಗಳನ್ನು ಮಟ್ಟಹಾಕಲು ಮನಸ್ಸು ಮಾಡದಿರುವುದು ಸಾರ್ವಜನಿಕರ ಆಶ್ಚರ್ಯಕ್ಕೆ ಕಾರಣವಾಗಿದೆ.
Leave a Comment