ಹೊನ್ನಾವರ – ಅಂತರಾಷ್ಟ್ರೀಯ ಗುಣಮಟ್ಟದ ಬ್ಲ್ಯೂ ಪ್ಲಾಗ್ ಮಾನ್ಯತೆ ಹೊಂದಿದ ದೇಶದ ಬೆರಳೆಣಿಕೆಯ ಕಡಲತೀರಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಡೆದ ತಾಲೂಕಿನ ಕಾಸರಕೋಡ ಇಕೋ ಬೀಚ್ ಉಕ್ಕಿಬಂದ ಸಮುದ್ರದಲೆಯ ಹೊಡೆತಕ್ಕೆ ಸಿಕ್ಕು ಮತ್ತೊಮ್ಮೆ ಅಂದಕಳೆದುಕೊಂಡಿದೆ. ಬ್ಲ್ಯೂ ಪ್ಲಾಗ್ ಮಾನ್ಯತೆ ಪಡೆದು ವರ್ಷ ತುಂಬುವ ಮೊದಲೇ ಎರಡೆರಡುಬಾರಿ ಅಲೆಯ ಹೊಡೆತಕ್ಕೆ ನಜ್ಜುಗುಜ್ಜಾದ ಇಕೋ ಬೀಚ್ ಜಿಲ್ಲಾಡಳಿತದ ಪಾಲಿಗೆ ಬಿಳಿಯಾನೆ ಸಾಕಿದಂತಾಗಬಹುದೇ ಎನ್ನುವ ಅನುಮಾನ ಕಾಡತೊಡಗಿದೆ.

33 ಮಾನದಂಡದ 98 ಅಂಶಗಳನ್ನು ಪಾಲಿಸುವ ಮೂಲಕ ಕಳೆದ ಡಿಸೆಂಬರ್‍ನಲ್ಲಿ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದುಕೊಂಡ ಇಕೋ ಬೀಚ್ ಅದಕ್ಕಿಂತಲೂ ಮುಂಚೆಯೇ ಮಾನ್ಯತೆ ಪಡೆಯಬೇಕಿತ್ತಾದರೂ 2020 ಜುಲೈ ತಿಂಗಳಿನಲ್ಲಿ ಸಮುದ್ರದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಅಲೆಯ ಹೊಡೆತಕ್ಕೆ ಮುಕ್ತಾಯ ಹಂತಕ್ಕೆ ಬಂದಿದ್ದ ಕಾಮಗಾರಿ ಕೊಚ್ಚಿಕೊಂಡು ಹೋಗಿ ಅಪಾರ ನಷ್ಟವಾಗಿತ್ತು. ಉದ್ಘಾಟನೆಗೂ ಮೊದಲೇ ಎದುರಾದ ವಿಘ್ನದಿಂದ ಪಾಠ ಕಲಿಯುತ್ತೇವೆ ಎಂದ ಅಧಿಕಾರಿಗಳು ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿಯೇ ಹಾನಿಯಾಗಿದ್ದನ್ನು ಸರಿಪಡಿಸಿ ಡಿಸೆಂಬರ್ ಅಂತ್ಯಕ್ಕೆ ಬ್ಲ್ಯೂ ಪ್ಲ್ಯಾಗ್ ಮಾನ್ಯತೆ ಪಡೆದುಕೊಂಡಿದ್ದರು.

2020 ಡಿಸೆಂಬರ್ ಕೊನೆಯ ವಾರದಿಂದ ಮಾರ್ಚ 2021 ರ ವರೆಗೆ ಅಪಾರ ಪ್ರಮಾಣ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುವ ಮೂಲಕ ತಾಲೂಕು ಹಾಗೂ ಜಿಲ್ಲೆಯ ಮಟ್ಟಿಗೆ ಪ್ರವಾಸೋದ್ಯಮದ ಹೊಸ ಸಾಧ್ಯತೆಯನ್ನು ಇಕೋ ಬೀಚ್ ತೆರೆದಿಟ್ಟಿದೆ ಎಂದೇ ಅರ್ಥೈಸಲಾಗಿತ್ತು. ಆದರೆ ಇತ್ತೀಚೆಗೆ ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡ ತೌಕ್ತೆ ಚಂಡಮಾರುತದ ಪ್ರಭಾವದಿಂದ ಎಲ್ಲರ ನಿರೀಕ್ಷೆಯ ಆಶಾಗೋಪುರ ಮತ್ತೊಮ್ಮೆ ಕುಸಿಯುವಂತಾಗಿದ್ದು ಮಾತ್ರ ಜಿಲ್ಲೆಯ ದುರ್ದೈವ.
ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಇದೇ ಮೇ 30 ರಂದು ಇಕೋ ಬೀಚ್‍ನ್ನು ಉತ್ತರಕನ್ನಡ ಜಿಲ್ಲಾಡಳಿತಕ್ಕೆ ಕೇಂದ್ರ ಸರ್ಕಾರ ಹಸ್ತಾಂತರ ಮಾಡುವುದರಲ್ಲಿತ್ತು. ಅಷ್ಟರಲ್ಲಾಗಲೇ ಅನಾಹುತ ಸಂಭವಿಸಿದ್ದು ಮತ್ತೊಮ್ಮೆ ಇಕೋ ಬೀಚ್ ಗುಣಮಟ್ಟವನ್ನು ಎತ್ತರಿಸುವ ಸಾಹಸಕ್ಕೆ ಮುಂದಾಗಬೇಕಿದೆ.
ಕೇಂದ್ರ ಸರಕಾರ ಭಾರತದ 100 ಬೀಚ್ ಗಳನ್ನು ಬ್ಲ್ಯೂ ಫ್ಲ್ಯಾಗ್ ಗೆ ಸ್ಪರ್ಧಿಸುವಂತೆ ಸೂಚಿಸಿತ್ತು. 35 ಬೀಚ್ ಗಳನ್ನು ಮಾಡಹುದು ಅನಿಸಿತ್ತು. 8 ಬೀಚ್ ಗಳು ಆಯ್ಕೆಯಾಗಿದ್ದು ಅದರಲ್ಲೊಂದು ಹೊನ್ನಾವರದ ಕಾಸರಕೋಡ ಇಕೋ ಬೀಚ್ ಆಗಿತ್ತು.

ಇಂಜನಿಯರ್‍ಗಳು ಎಡವಿದ್ದೆಲ್ಲಿ
ಉದ್ಘಾಟನೆಗೆ ಮೊದಲೇ ಸಮುದ್ರದಲೆಯ ಹೊಡೆತದಿಂದ ಹಾನಿಗೊಳಗಾದ ಇಕೋಬೀಚ್‍ನಲ್ಲಿನ ವೀಕ್ಷಣಾಗೋಪುರ, ವಾಕಿಂಗ್ ಪಾತ್, ಶೌಚಾಲಯ ಮುಂತಾದವನ್ನು ತರಾತುರಿಯಲ್ಲಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದರಾದರೂ ಈ ವರ್ಷ ಮಳೆಗಾಲ ಆರಂಭವಾಗುವ ಪೂರ್ವದಲ್ಲಿಯೇ ಕಾಣಿಸಿಕೊಂಡ ಚಂಡಮಾರುತದದಿಂದಾಗಿ ಕಡಲಿನಲ್ಲಿ ಎರಡು ಮೂರು ಮೀಟರ್ ಎತ್ತರದ ಅಲೆಗಳು ಕಾಣಿಸಿಕೊಂಡು ರಭಸವಾಗಿ ದಡಕ್ಕೆ ಅಪ್ಪಳಿಸಿದ ಪರಿಣಾಮ ಅಂತರಾಷ್ಟ್ರೀಯ ಗುಣಮಟ್ಟದ ಬೀಚ್‍ಗೆ ಅಪಾರ ಹಾನಿಯಾಗಿದೆ. ಇದು ಇಲ್ಲಿಗೆ ನಿಲ್ಲುವ ಲಕ್ಷಣಗಳಿಲ್ಲ. ಸಮುದ್ರ ಬೇಸಿಗೆಯಲ್ಲಿ ಹಲವು ಮೀಟರ್ ಹಿಂದೆ ಸರಿಯುವುದು ಮತ್ತು ಮಳೆಗಾಲದಲ್ಲಿ ಅದಕ್ಕಿಂತಲೂ ಮುಂದೆ ಉಕ್ಕೇರಿ ಬರುವುದು ಜನ ಸಾಮಾನ್ಯರಿಗೂ ತಿಳಿದಿರುವ ಲಾಜಿಕ್. ಈ ಸರಳ ಸಂಗತಿಯನ್ನು ಅಂದಾಜಿಸಲು ತಾಂತ್ರಿಕ ಪರಿಣಿತರ ತಂಡ ವಿಫಲವಾಯಿತೇ ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಪ್ರಕೃತಿ ವಿಕೋಪಗಳೆದುರು ಮಾನವ ಶ್ರಮ ಮಂಡಿಯೂರುವುದು ಸಹಜವಾದರೂ ಮಳೆಗಾಲ ಆರಂಭವಾಗುವ ಪೂರ್ವದಲ್ಲಿ ಕಾಣಿಸಿಕೊಳ್ಳುವ ಕಡಲಿನ ಉಬ್ಬರವನ್ನು, ಅಲೆಗಳ ಎತ್ತರವನ್ನೂ ಸರಿಯಾಗಿ ಲೆಕ್ಕಹಾಕಿ ಒಂದಷ್ಟು ಹಿಂದೆಯೇ ಪ್ರವಾಸಿಗರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿದ್ದೇ ಆದರೆ ಪದೇ ಪದೇ ಹಾನಿಗೊಳಗಾಗುವುದನ್ನು ತಪ್ಪಿಸಬಹುದಿತ್ತೇನೋ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
Leave a Comment