ಹೊನ್ನಾವರ : ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರೂ ಕೋತಿ ತಾನು ಕೆಟ್ಟಿದ್ದಲ್ಲದೆ ವನವನ್ನೆಲ್ಲಾ ಕೆಡಿಸಿತಂತೆ ಎನ್ನುವ ಮಾತಿನಂತಿದೆ ಕೆಲವರ ವರ್ತನೆ. ಇಡೀ ದೇಶ ಕೊರೊನಾ ಕಪಿಮುಷ್ಠಿಯಿಂದ ಹೊರಬರಲು ಒದ್ದಾಡುತ್ತಿರುವ ಗುದ್ದಾಡುತ್ತಿರುವಾಗ ಇಲ್ಲೊಬ್ಬ ತಾನು ಕೊರೊನಾ ಪಾಸಿಟಿವ್ ಆಗಿದ್ದರೂ ಖಾಸಗಿ ರಕ್ತ ತಪಾಸಣಾ ಕೇಂದ್ರದ ಬಾಗಿಲು ತೆರೆದು ಕುಳಿತುಕೊಂಡು ತಪಾಸಣೆಗೆ ಬರುವ ಮತ್ತಷ್ಟು ಜನರಿಗೆ ಕೊರೊನಾ ಸೋಂಕನ್ನು ಹರಡುವ ಉದ್ದೇಶದಲ್ಲಿದ್ದಂತೆ ವರ್ತಿಸುತ್ತಿದ್ದವನಮೇಲೆ ಪಟ್ಟಣಪಂಚಾಯತ ಅಧಿಕಾರಿಗಳು ಹಾಗೂ ಪೊಲೀಸರು ಕೇಸ್ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.
ಹೊನ್ನಾವರ ಪಟ್ಟಣದಲ್ಲಿ ರಕ್ತತಪಾಸಣಾ ಕೇಂದ್ರ ಹೊಂದಿರುವ ವಿನಾಯಕ ವಸಂತ ನಾಯ್ಕ ಎಂಬಾತನೇ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದವನಾಗಿದ್ದಾನೆ. ಈತ ಸ್ವತ: ಕೋವಿಡ್ ಪಾಸಿಟಿವ್ ಆಗಿದ್ದು 14 ದಿನ ಹೋಂ ಐಸೋಲೇಷನ್ನಲ್ಲಿರಬೇಕಾಗಿತ್ತಾದರೂ ಹಾಗೆ ಮಾಡದೇ ರಕ್ತತಪಾಸಣಾ ಕೇಂದ್ರವನ್ನು ತೆರೆದುದಲ್ಲದೆ ರಸ್ತೆಯಲ್ಲಿಯೂ ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು ಎನ್ನಲಾಗಿದೆ.
ಈಬಗ್ಗೆ ಸ್ಥಳೀಯ ಪಟ್ಟಣಪಂಚಾಯತ ಅಧಿಕಾರಿಗಳು ಸಾಕಷ್ಟು ಎಚ್ಚರಿಕೆ ನೀಡಿದ್ದರೂ ಕೇರ್ ಮಾಡದ ಹಿನ್ನಲೆಯಲ್ಲಿ ಪಟ್ಟಣಪಂಚಾಯತ ಆರೋಗ್ಯ ನಿರೀಕ್ಷಕ ಸುನೀಲ್ ಗಾವಡೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಸಿ.ಪಿ.ಐ ಶ್ರೀಧರ ಎಸ್.ಆರ್, ಪಿ.ಎಸ್.ಐ ಶಶಿಕುಮಾರ್ ಸಿ.ಆರ್, ಸಿಬ್ಬಂದಿಗಳಾದ ಚಂದ್ರಶೇಖರ ನಾಯ್ಕ, ಶಿವಾನಂದ ಚಿತ್ರಗಿ, ರೇವಣಸಿದ್ದ ಅವರು ಪರಿಶೀಲನೆ ನಡೆಸಿ ಕೋವಿಡ್ ನಿಯಮಾವಳಿ ಉಲ್ಲಂಘನೆಯ ಪ್ರಕರಣ ದಾಖಲಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸುವವರಲ್ಲಿ ವಿದ್ಯಾವಂತರೇ ಹೆಚ್ಚು!
ನಿಜಕ್ಕೂ ಇದು ಆಘಾತ ತರಿಸುವ ಸಂಗತಿಯಾದರೂ ಇದೇ ಸತ್ಯ. ಕೋವಿಡ್ ಸೋಂಕಿನಿಂದ ನಿತ್ಯವೂ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದಾಯದ ಮೂಲವಿಲ್ಲದೇ ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದ್ದರೂ ಜನರ ಜೀವ ಉಳಿಸುವ ಅನಿವಾರ್ಯತೆಯಲ್ಲಿ ಸರ್ಕಾರಗಳು ಲಾಕ್ಡೌನ್ ಮೊರೆ ಹೋಗಿವೆ ಆದರೆ ಆಕಡೆ ಪೂರ್ಣ ಪ್ರಾಜ್ಞರೂ ಅಲ್ಲದ ಈ ಕಡೆ ನಿರಕ್ಷರಕುಕ್ಷಿಗಳೂ ಅಲ್ಲದ ಅರ್ಧಂಬರ್ದ ಕಲಿತು ವಿದ್ಯಾವಂತರೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹೆಚ್ಚಿನವರು ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬರುವ ತಲೆಬುಡವಿಲ್ಲದ ಮಾಹಿತಿಗಳನ್ನೇ ನಂಬಿ ತಮಗೇ ಎಲ್ಲಾ ಗೊತ್ತಿದೆ ಎನ್ನುವಂತೆ ವರ್ತಿಸುತ್ತಾ ತಾವು ತೊಂದರೆಗೊಳಗಾಗುವುದಲ್ಲದೇ ಇತರರನ್ನೂ ತೊಂದರೆಗೆ ಸಿಲುಕಿಸುತ್ತಿದ್ದಾರೆನ್ನುವ ಗಂಭೀರ ಆಪಾದನೆಯಿದೆ.
ಹೊನ್ನಾವರದ ಘಟನೆಯೂ ಇದಕ್ಕೆ ಹೊರತಾಗಿಲ್ಲ ಕೋವಿಡ್ ನಿಯಮ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ವಿನಾಯಕ ನಾಯ್ಕ ಅನಕ್ಷರಸ್ಥನೇನಲ್ಲ. ಪದವೀಧರನಾಗಿರುವ ಈತನ ಕೋವಿಡ್ ರಿಪೋರ್ಟ್ ಮೇ 14 ರಂದು ಪಾಸಿಟಿವ್ ಬಂದಿತ್ತು. ಆದರೂ ಈತ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಈತನ ನಿರ್ಲಕ್ಷ್ಯದ ಪರಿಣಾಮವೋ ಎನ್ನುವಂತೆ ಈತನ ಪಾಲಕರಿಗೂ ಕೋವಿಡ್ ಸೋಂಕು ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೋವಿಡ್ ಪಾಸಿಟಿವ್ ಆಗಿದ್ದರೂ ರಕ್ತ ತಪಾಸಣಾ ಕೇಂದ್ರ ತೆರೆದ ಆರೋಪಿ ವಿನಾಯಕ
Leave a Comment