ಭಟ್ಕಳ: 45 ವರ್ಷ ಮೇಲ್ಪಟ್ಟವರಿಗೂ ಕೊರೊನಾ ತಡೆ ಲಸಿಕೆ ನೀಡಲಾಗುತ್ತದೆ ಎನ್ನುವ ಮಾಹಿತಿ ಪಡೆದ ಜನರು ಒಮ್ಮೆಲೇ ಆಸ್ಪತ್ರೆಯತ್ತ ದೌಡಾಯಿಸಿ ಬಂದ ಪರಿಣಾಮವಾಗಿ ಜನರ ನೂಕು ನುಗ್ಗಲು ಉಂಟಾಗಿದ್ದು, ಜನರನ್ನು ಚೆದುರಿಸಲು ಆಸ್ಪತ್ರೆ ಸಿಬ್ಬಂದಿಗಳು ಹರಸಾಹಸ ಪಟ್ಟ ಘಟನೆ ನಡೆದಿದೆ.
ಪೂರ್ವ ನಿಗದಿಯಂತೆ ತಾಲೂಕಿನ ವಿವಿಧ ಸಹಕಾರಿ ಸಂಘಗಳ ನೌಕರರು, ಪಂಚಾಯತ ಸಿಬ್ಬಂದಿಗಳು ಲಸಿಕೆ ಪಡೆಯಲು ಆಸ್ಪತ್ರೆಗೆ ಆಗಮಿಸಿದ್ದರು. ಈ ನಡುವೆ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಿಂದ ಭಟ್ಕಳ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸಂದೇಶ ರವಾನೆಯಾಯಿತು.
ಈ ಮಾಹಿತಿಯನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲವು ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದು, ಈ ಮೂಲಕ ಸದರಿ ಮಾಹಿತಿ ಕೆಲವೇ ನಿಮಿಷಗಳ ಅವಧಿಯಲ್ಲಿ ನೂರಾರು ಮಂದಿಯನ್ನು ತಲುಪಿತು. ಕೂಡಲೇ ನೂರಾರು ಜನರು ಆಸ್ಪತ್ರೆಯತ್ತ ಧಾವಿಸಿ ಬಂದ ಪರಿಣಾಮವಾಗಿ ಲಸಿಕೆ ವಿತರಣಾ ಕೇಂದ್ರ ಜನರಿಂದ ತುಂಬಿ ತುಳುಕಾಡಿತು. ಈ ನಡುವೆ ಬೆಳಿಗ್ಗೆಯಿಂದ ಲಸಿಕೆಗಾಗಿ ಸರತಿ ಸಾಲಿನಲ್ಲಿ ನಿಂತವರು ಗೊಂದಲಕ್ಕೆ ಒಳಗಾಗಿ, ಸ್ಥಳದಲ್ಲಿ ಗೌಜಿ ಗದ್ದಲ ನಿರ್ಮಾಣವಾಯಿತು.
ನಂತರ ಸಿಪಿಐ ದಿವಾಕರ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ನಂತರ ಸ್ಥಳಕ್ಕೆ ಆಗಮಿಸಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಸರತಿ ಸಾಲಿನಲ್ಲಿ ನಿಂತವರ ಹೆಸರನ್ನು ನೊಂದಾಯಿಸಿಕೊಂಡು ಮರುದಿನ ಲಸಿಕೆ ಪಡೆಯಲು ಮೊದಲ ಪ್ರಾಶಸ್ತ್ಯ ನೀಡುವುದಾಗಿ ಜನರನ್ನು ಸಮಾಧಾನಪಡಿಸಿದರು. ನಂತರ ಹಲವರು ಗೊಣಗುಡುತ್ತಲೇ ಅಲ್ಲಿಂದ ತೆರಳಿದ ಕಾರಣ ಪರಿಸ್ಥಿತಿ ಶಾಂತವಾಯಿತು.
Leave a Comment