ಇನ್ಪೋಸಿಸ್ ನೆರವು ನೆನೆಯುತ್ತಾ ತಮ್ಮ ವೈಪಲ್ಯ ಒಪ್ಪಿಕೊಂಡ ಶಾಸಕ
ಹೊನ್ನಾವರ : ತಾಲೂಕಾಸ್ಪತ್ರೆಗೆ ಇನ್ಪೋಸಿಸ್ ಸಂಸ್ಥೆಯವರು ನೀಡಿದ 30 ಲಕ್ಷ ಮೊತ್ತದ ಲ್ಯಾಬ್ ಉದ್ಘಾಟಿಸಿದ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಇನ್ಪೋಸಿಸ್ ಸಂಸ್ಥೆ ಹಾಗೂ ಸುಧಾಮೂರ್ತಿಯವರ ಕೊಡುಗೆಯನ್ನು ಶ್ಲಾಘಿಸುತ್ತಲೇ ತಾಲೂಕಾಸ್ಪತ್ರೆಯ ಮೇಲ್ಚಾವಣಿ ಸೋರುತ್ತಿರುವ ಸಂಗತಿ ಬಹಳಷ್ಟು ಸಲ ಗಮನಕ್ಕೆ ಬಂದರೂ ಸರ್ಕಾರದಿಂದ ಅನುದಾನವನ್ನು ತರಲು ಸಾಧ್ಯವಾಗಿಲ್ಲ ಎಂದು ತಮ್ಮ ವೈಪಲ್ಯವನ್ನು ಒಪ್ಪಿಕೊಂಡು ಆಶ್ಚರ್ಯ ಮೂಡಿಸಿದರು.

ಸುಧಾಮೂರ್ತಿಯವರ ಇನ್ಫೋಸಿಸ್ ಫೌಂಡೇಶನ್ ಹೊನ್ನಾವರ ತಾಲೂಕಾಸ್ಪತ್ರೆಯ ಮೂಲ ಸೌಕರ್ಯ ವೃದ್ಧಿಗಾಗಿ ಸುಮಾರು 4.5 ಕೋಟಿಯಷ್ಟು ದೊಡ್ಡ ಮೊತ್ತದ ನೆರವು ನೀಡಲು ಮುಂದೆ ಬಂದಿದ್ದು 30 ಲಕ್ಷ ವೆಚ್ಚದ ಸುಧಾರಿತ ತಂತ್ರಜ್ಞಾನದ ಪ್ರಯೋಗಾಲಯ, ಆಸ್ಪತ್ರೆಯ ಮೇಲ್ಛಾವಣಿ ಸೇರಿದಂತೆ ಈಗಾಗಲೇ ಸುಮಾರು 1 ಕೋಟಿಗೂ ಅಧಿಕ ಮೊತ್ತದ ಕೆಲಸವಾಗಿದೆ. ಹೊರ ರೋಗಿ ಚಿಕಿತ್ಸಾ ಕೇಂದ್ರ ವಿಸ್ತರಣೆ ಸೇರಿದಂತೆ ಇನ್ನೂ ಹಲವು ಅಭಿವೃದ್ಧಿಕೆಲಸಗಳಿಗೆ ಇನ್ಪೋಸಿಸ್ ನೆರವು ನೀಡಲಿರುವುದಾಗಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ತಿಳಿಸಿದ್ದಾರೆ.
ಸಂಘ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ನೀಡುತ್ತಿರುವ ನೆರವು ಹಾಗೂ ಸಹಕಾರದಿಂದ ಮಾತ್ರ ಕೊರೊನಾದಂತ ಸಂಕಷ್ಟ ಸ್ಥಿತಿಯಲ್ಲಿಯೂ ವೈದ್ಯರು, ದಾದಿಯರು ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಎನ್ನುವ ಅಭಿಪ್ರಾಯವಿದೆ. ಎರಡು ಹೊತ್ತಿನ ಊಟವನ್ನು ವಿಜು ಕಾಮತ್, ರಾಜು ಭಂಡಾರಿ ಸಹಿತ ಬಿಜೆಪಿ ಮಂಡಳದ ವತಿಯಿಂದ ನೀಡುತ್ತಿದ್ದಾರೆ. ಕೋವಿಡ್ ತಪಸಾಸಣಾ ಕೇಂದ್ರವನ್ನು ಶ್ರೀಕಲಾ ಶಾಸ್ತ್ರಿ ಹಾಗೂ ಸುಬ್ರಹ್ಮಣ್ಯ ಶಾಸ್ತ್ರಿ ದಂಪತಿಗಳು ನಿರ್ಮಿಸಿಕೊಟ್ಟಿದ್ದಾರೆ, ಆರೋಗ್ಯ ಕಾರ್ಯಕರ್ತರು ಸಿಬ್ಬಂದಿಗಳು ಬಂದು ಹೋಗುವುದಕ್ಕೆ ಎಸ್.ಆರ್.ಎಲ್ ಸಮೂಹದ ವೆಂಕಟರಮಣ ಹೆಗಡೆ ಹಾಗೂ ಯಶೋಧರ ನಾಯ್ಕ ಅವರು ವಾಹನ ವ್ಯವಸ್ಥೆ ಮಾಡಿದ್ದಾರೆ.

ರೋಟರಿ. ಲಯನ್ಸ್ ಮುಂತಾದ ಸಂಸ್ಥೆಯವರು ಹಲವು ರೀತಿಯ ಸಹಾಯ ಮಾಡಿದ್ದಾರೆ. ಆದರೆ ಸರ್ಕಾರ, ಜನಪ್ರತಿನಿಧಿಗಳು ಏನು ಮಾಡಿದ್ದಾರೆ ಎಂದು ಕೇಳಿದರೆ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಖರೀದಿಸಿದ ಅಂಬುಲೆನ್ಸ್, ಕೊವಿಡ್ ಸೋಂಕಿತರ ಓಡಾಟಕ್ಕೆ ವೈಯ್ಯಕ್ತಿಕ ಹಣದಲ್ಲಿ ನೀಡಿದ ಮೀಸಲಿಟ್ಟ ಅಂಬುಲೆನ್ಸ್ ಬಿಟ್ಟರೆ ಬೇರೆ ನೆರವು ಕಾಣಿಸುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ತಾಲೂಕಾಸ್ಪತ್ರೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ
ಇನ್ಪೋಸಿಸ್ನಂತ ಖಾಸಗಿ ಸಂಸ್ಥೆ ತಾಲೂಕಾಸ್ಪತ್ರೆಯ ಅಭಿವೃದ್ಧಿಗೆ ಕೋಟಿ ಕೋಟಿ ಹಣವನ್ನು ಖರ್ಚುಮಾಡುತ್ತಿರುವಾಗ ತಾನು ವೈಯಕ್ತಿಕವಾಗಿ ಕೊಡುವುದಿರಲಿ ಒಬ್ಬ ಶಾಸಕನಾಗಿ ಸರ್ಕಾರದಿಂದ ಅನುದಾನ ಒದಗಿಸಿಕೊಡಲು ಸಾಧ್ಯವಾಗಿಲ್ಲ ಎಂದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವುದನ್ನು ತಡವಾಗಿ ಅರ್ಥಮಾಡಿಕೊಂಡ ದಿನಕರ ಶೆಟ್ಟಿ ಅವರು ತಾಲೂಕಾಸ್ಪತ್ರೆಯ ಹೆಚ್ಚುವರಿ ವಾರ್ಡ್ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.

Leave a Comment