ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿ ಸ್ವಾಭಿಮಾನ ಮತ್ತು ಸ್ವಂತಿಕೆಯನ್ನು ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಹಂತಹಂತವಾಗಿ ಸಾಧನೆಯ ಶಿಖರವೇರಿ ಭಾಷಣ – ಬರವಣಿಗೆ – ಯಕ್ಷಗಾನಗಳಲ್ಲಿ ಅಮೋಘವಾದ ನೈಪುಣ್ಯತೆಯನ್ನು ಸಂಪಾದಿಸಿದವರು ಡಾ. ಎಂ. ಆರ್. ನಾಯಕ.

ಹೊನ್ನಾವರ ಎಸ್.ಡಿ.ಎಂ. ಪದವಿಮಹಾವಿದ್ಯಾಲಯದಲ್ಲಿ ಕಳೆದ 33 ವರ್ಷಗಳಿಂದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ತರಗತಿ ಕೋಣೆಗಳಲ್ಲಿ ತಮ್ಮ ಪಾಂಡಿತ್ಯಪೂರ್ಣ ಉಪನ್ಯಾಸದಿಂದ ವಿದ್ಯಾರ್ಥಿಗಳ ಮನಗೆದ್ದ ಇವರು ಯಕ್ಷಗಾನದಲ್ಲಿಯೂ ಯಾವುದೇ ವೃತ್ತಿ ಕಲಾವಿದರಿಗೆ ಕಡಿಮೆ ಇಲ್ಲದಂತೆ ಮೆರೆದು ಯಕ್ಷರಸಿಕರ ಮನಸೂರೆಗೊಂಡವರು.
ಯಾವುದನ್ನೇ ಕಲಿಯಹೊರಟರೆ, ತಿಳಿಯ ಹೊರಟರೆ ಅದನ್ನು ಪೂರ್ತಿಯಾಗಿ ಕರಗತಮಾಡಿಕೊಳ್ಳುವುದು ನಾಯಕರ ವೈಶಿಷ್ಟ್ಯ. ಅಂತೆಯೇ ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಯಬೇಕೆಂಬ ಹಂಬಲಕ್ಕೆ ಮೊದಲು ಬೆಂಬಲವಾಗಿ ನಿಂತವರು ಹೊಸತೋಟ ಮಂಜುನಾಥ ಭಾಗವತರು. ಅನಂತರ ಉಮೇಶ ಭಟ್ಟ ಬಾಡ ಮತ್ತು ಕೃಷ್ಣ ಭಂಡಾರಿ ಗುಣವಂಂತೆ ಇವರ ಮಾರ್ಗದರ್ಶನದಲ್ಲಿ ನಿರಂತರ ಪರಿಶ್ರಮದಿಂದ ಹೆಜ್ಜೆಗಳನ್ನು ಕಲಿತು ಯಕ್ಷಗಾನದಲ್ಲಿ ನಾಯಕ-ಪ್ರತಿನಾಯಕ ಪಾತ್ರಗಳಿಗೆ ಗೆಜ್ಜೆ ಕಟ್ಟಿದರು. ವಿಶೇಷವಾಗಿ ಕೌರವ, ಕೀಚಕ, ಭೀಷ್ಮ, ಜಾಂಬವ, ಉಗ್ರಸೇನ, ಸುಧನ್ವ, ಹನುಮಂತ ಮೊದಲಾದ ಪಾತ್ರಗಳು ಇವರಿಗೆ ಸಿದ್ಧಿಯನ್ನೂ ಪ್ರಸಿದ್ಧಿಯನ್ನೂ ತಂದುಕೊಟ್ಟಿತು.
ಯಕ್ಷಗಾನವನ್ನು ವೃತ್ತಿಗಾಗಿ ಬಳಸದೇ ಇದರಿಂದ ಹೆಚ್ಚಿನದೇನನ್ನೂ ಗಳಿಸದೇ ಇದರ ಶ್ರೆÉೀಷ್ಠತೆಯನ್ನು ಸ್ವಪ್ರಚಾರದ ಸಾಧನದ ಮಟ್ಟಕ್ಕೆ ಇಳಿಸದೇ ಕೇವಲ ಆತ್ಮಾನಂದದ ಹವ್ಯಾಸಕ್ಕಾಗಿ ಬೆಳೆಸಿಕೊಂಡ ಇವರು ಚಿಟ್ಟಾಣಿ, ಕೊಂಡದಕುಳಿ, ತೋಟಿ, ಜಲವಳ್ಳಿ, ಯಲಗುಪ್ಪಾ, ನಿಲ್ಕೋಡ ಮೊದಲಾದವರ ಜೊತೆ ಪಾತ್ರಮಾಡಿದ್ದಲ್ಲದೇ ಸುಪ್ರಸಿದ್ಧ ಭಾಗವತರಾದ ಕೋಳಗಿ ಕೇಶವ ಹೆಗಡೆ, ಸುಬ್ರಹ್ಮಣ್ಯ ಧಾರೇಶ್ವರ, ರಾಘವೇಂದ್ರ ಜನ್ಸಾಲೆ, ಹಿಲ್ಲೂರು ರಾಮಕೃಷ್ಣ, ಸುರೇಶ ಶೆಟ್ಟಿ ಅವÀರಿಂದಲೂ ಸೈ ಎನಿಸಿಕೊಂಡಿದ್ದಾರೆ.
ಕಲಾಗಂಗೋತ್ರಿಯ ಸದಸ್ಯರಾಗಿ, ರಂಗವೈಭವ ಕುಮಟಾದ ಅಧ್ಯಕ್ಷರಾಗಿ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಇವರು ವಿವೇಕ ನಗರ ವಿಕಾಸ ಸಂಘ ಕುಮಟಾದ ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿಯೂ ನಿರಂತರವಾಗಿ ತೊಡಿಗಿಸಿಕೊಂಡಿದ್ದಾರೆ. ಇವರಲ್ಲಿ ಅರವತ್ತರಲ್ಲೂ ಅರಳುತ್ತಿರುವ ಉತ್ಸಾಹ ನಿಜವಾಗಿಯೂ ಮಾದರಿಯಾಗಿದೆ.
ಸ್ವತಃ ಕಲಾವಿದರೂ, ಅತ್ಯುತ್ತಮ ಸಂಘಟಕರೂ, `ನಾಯಕ’ ಪದಕ್ಕೆ ಅನ್ವರ್ಥವಾಗಿರುವ ಇವರು ಇದುವರೆಗೆ ಅನೇಕ ಸಂಘಸಂಸ್ಥೆಗಳ ಗೌರವಕ್ಕೆ ಭಾಜನರಾಗಿದ್ದಾರೆ. ಯಕ್ಷರಕ್ಷೆ ಮುರುಡೇಶ್ವರ, ಕಲಾಗಂಗೋತ್ರಿ ಕುಮಟಾ, ಹುಬ್ಬಳ್ಳಿಯ ಹೆಬ್ಬಳ್ಳಿ ಮಠ, ಅಂಕೋಲಾ, ಅಗಸೂರ, ಬೆಲೇಕೇರಿ, ಹೊನ್ನಾವರದ ನಾಗರಿಕರಿಂದ, ಕುಮಟಾ ನಾಡವರ ಸಮಾಜದಿಂದ ಹೀಗೆ ಹತ್ತು ಹಲವು ಸಂಘಟನೆಗಳು ಇವರಿಗೆ ಶಾಲು ಹೊದೆಸಿ ಪ್ರೀತಿಯ ಗೌರವ ನೀಡಿ ಸನ್ಮಾನಿಸಿದ್ದಾರೆ.
ಪ್ರಾಧ್ಯಾಪಕ, ಕಲಾವಿದ, ಸಂಘಟಕ, ನೇರ ನಡೆನುಡಿಯ ನಿರರ್ಗಳ ಮಾತುಗಾರ ಬಹುಮುಖ ಪ್ರತಿಭಾ ಸಂಪನ್ನ ಡಾ. ಎಂ. ಆರ್. ನಾಯಕ ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳೆರಡಕ್ಕೂ ನ್ಯಾಯ ಒದಗಿಸುತ್ತಿರುವ ಅಪರೂಪದ ವ್ಯಕ್ತಿಯಾಗಿದ್ದು ಅನೇಕರ ಬಾಳಿಗೆ ಬೆಳಕಾಗಿದ್ದಾರೆ.
Leave a Comment