ಉಪವಾಸ, ಧ್ಯಾನ, ತಪಸ್ಸು, ಆರಾಧನೆ ಮೊದಲಾದ ವಿಧಾನಗಳಿಂದ ಆತ್ಮದರ್ಶನ ಮಾಡಿಕೊಳ್ಳುವುದರ ಜೊತೆಗೆ ಭಕ್ತರನ್ನು ಉದ್ಧರಿಸುವ, ಆಧ್ಯಾತ್ಮಿಕ ಚೈತನ್ಯ ಪಡೆಯುವುದನ್ನು ಎಲ್ಲ ಧರ್ಮದಲ್ಲೂ ಹೇಳಲಾಗಿದೆ. ಕೆಲವು ಸಮಯದ ಆರಾಧನೆಯಾದರೆ, ಕೆಲವು ತಿಂಗಳುಗಟ್ಟಲೆ ನಡೆಯುವ ಆರಾಧನೆಗಳು.
ಹಿಂದು, ಜೈನ, ಮೊದಲಾದ ಧರ್ಮಗಳಲ್ಲಿ ಹೇಳಲಾದ ಚಾತುರ್ಮಾಸ್ಯ ವೃತಾಚರಣೆ ವೃತಗಳಲ್ಲಿಯೇ ದೀರ್ಘಕಾಲ ನಡೆಯುವಂತಹದು. ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗಿನ ಅವಧಿಯ ನಾಲ್ಕು ತಿಂಗಳು ನಿರ್ದಿಷ್ಟ ಸ್ಥಳದಲ್ಲಿದ್ದು ತಪಸ್ಸು ಆಚರಿಸುವುದನ್ನು ಚಾತುರ್ಮಾಸ್ಯ ವೃತ ಎಂದು ಕರೆಯಲಾಗಿದ್ದು ಸನ್ಯಾಸಿಗಳ ಜೀವನದಲ್ಲಿ ಚಾತುರ್ಮಾಸ್ಯ ಆಚರಣೆ ಮಹತ್ವದ ಘಟನೆಯಾಗಿದೆ.

ಆಷಾಢ ಏಕಾದಶಿಯನ್ನು ಶಯನೀಯ ಏಕಾದಶಿ ಎಂದು ಕರೆಯುತ್ತಾರೆ. ಭಗವಂತನು ನಾಲ್ಕು ತಿಂಗಳು ತನ್ನ ಲೀಲಾವ್ಯಾಪಾರವನ್ನು ನಿಲ್ಲಿಸಿ ಆತ್ಮಾರಾಮನಾಗಿ ಕ್ಷೀರಸಾಗರದಲ್ಲಿ ಪವಡಿಸುವನೆಂದು ಕಾರ್ತಿಕ ದ್ವಾದಶಿಯಂದು ಪುನಃ ಎದ್ದು ಜಗದೋದ್ಧಾರಕಾರ್ಯಕ್ಕೆ ತೊಡಗುವನೆಂದು ನಂಬಿಕೆ ಇದೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ಭಗವಂತನು ವಿಶ್ರಾಂತಿಯಲ್ಲಿರುವುದರಿಂದ ನಮ್ಮ ರಕ್ಷಣೆಗೆ ಬರುವುದಿಲ್ಲ. ನಾವೇ ನಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ.
ಅದಕ್ಕಾಗಿಯೇ ಈ ಅವಧಿಯಲ್ಲಿ ವಿಶೇಷ ವೃತ, ಉಪವಾಸ, ನಿಯಮ, ಧ್ಯಾನ, ಯಜ್ಞಾಧಿಗಳಿಂದ ಹೆಚ್ಚಿನ ಸತ್ವ ಪಡೆಯುವುದು ಅಗತ್ಯವಾಗಿರುವ ಕಾರಣ ಈ ಕಾಲದಲ್ಲಿಯೇ ಹೆಚ್ಚಿನ ಹಬ್ಬಗಳು ನಡೆಯುತ್ತವೆ. ದೇವರು ನಮಗೆ ಕಾಣುವುದಿಲ್ಲ, ಗುರುಗಳು ಕಾಣುತ್ತಾರೆ. ಇವೆರಡೂ ಪರಮಾತ್ಮನ ರೂಪಗಳು. ನಮ್ಮೊಡನಿರುವ ಗುರು ಚಾತುರ್ಮಾಸ್ಯಾವಧಿಯಲ್ಲಿ ವೃತಸ್ಥರಾಗುವುದರಿಂದ ಗುರುಸೇವೆಗೆ ಈ ಚಾತುರ್ಮಾಸ್ಯ ಮಹತ್ವ ಪಡೆದಿದೆ.
ಸನ್ಯಾಸಿಗಳು ಪಕ್ಷವನ್ನೇ ಮಾಸವಾಗಿ ಪರಿಗಣಿಸುವುದರಿಂದ ಎರಡು ತಿಂಗಳು ಅಂದರೆ ನಾಲ್ಕು ಪಕ್ಷ ಚಾತುರ್ಮಾಸ್ಯ ವೃತ ಆರಂಭಿಸುವ ಪರಂಪರೆ ಎಲ್ಲೆಡೆ ಇದೆ. ಕಾಲ ಬದಲಾದಂತೆ ಸನ್ಯಾಸದ ಸ್ವರೂಪದಲ್ಲಿ ಬದಲಾವಣೆಗಳಾದವು. ಸನ್ಯಾಸಿಗಳಿಗೆ ಇದು ವೃತ, ನಿಯಮವಾದರೆ ಭಕ್ತರಿಗೆ ಇದು ನಿತ್ಯ ಹಬ್ಬವಾಯಿತು. ಚಾತುರ್ಮಾಸ್ಯದಲ್ಲೇ ಗಣೇಶಚತುರ್ಥಿ, ದಸರಾ, ದೀಪಾವಳಿ ಹಬ್ಬಗಳು ಬಂದು ಹೋಗುತ್ತವೆ. ಹಬ್ಬದೊಳಗೆ ಹಬ್ಬ ಆಚರಿಸುತ್ತ ಭಗವಂತನ ಸ್ಮರಣೆ, ಆರಾಧನೆ ಇಲ್ಲಿ ಮುಖ್ಯವಾಗುತ್ತದೆ.
ಇವೆಲ್ಲಕ್ಕಿಂತ ಭಿನ್ನವಾಗಿ ಶ್ರೀ ಶ್ರೀಧರ ಸ್ವಾಮಿಗಳು ಚಾತುರ್ಮಾಸ್ಯ ಆಚರಿಸುತ್ತಿದ್ದ ಪರಿಯನ್ನು ಅವರ ಜೊತೆ ಬಹುಕಾಲ ಚಾತುರ್ಮಾಸ್ಯದಲ್ಲಿ ಪಾಲ್ಗೊಂಡ ಜನಾರ್ಧನ ರಾಮದಾಸಿ ಹೀಗೆ ವರ್ಣಿಸಿದ್ದಾರೆ.
‘ಶ್ರೀಧರ ಸ್ವಾಮಿಗಳು ವೃತ ನಡೆಸುವಾಗ ಭಕ್ತರಿಗೆ ದರ್ಶನ, ಆಶೀರ್ವಚನ ಯಾವುದೂ ಇರಲಿಲ್ಲ. ಕಟ್ಟುನಿಟ್ಟಾಗಿ ಏಕಾಂತ ಮತ್ತು ಮೌನ. ಹೊರಗಿನ ಕೋಣೆಯಲ್ಲಿ ಆಹಾರ ಇಟ್ಟು ಬಂದರೆ ಯಾವ ಸಮಯದಲ್ಲಿ ಸ್ವೀಕರಿಸುತ್ತಿದ್ದರೋ ಗೊತ್ತಿಲ್ಲ. ಬೊಗಸೆಯಲ್ಲಿ ಅನ್ನ, ಹಣ್ಣು ಪಡೆದು ಎರಡು ಹೆಬ್ಬೆರಳಿನಿಂದ ಎತ್ತಿಹಾಕಿ, ಅದು ಪಕ್ಷಿಗಳಿಗೆ, ಮೂರು ತುತ್ತು ಸೇವಿಸಿದ ಮೇಲೆ ಉಳಿದದ್ದು ಪ್ರಾಣಿಗಳಿಗೆ ಎಂದು ಬಿಟ್ಟುಬಿಡುತ್ತಿದ್ದರು. ಒಂದೆರಡು ತಿಂಗಳು ಸರಿದಂತೆ ಸಮಯ, ದಿನಾಂಕದ ಪರಿವೇ ಇರುತ್ತಿರಲಿಲ್ಲ. ಧ್ಯಾನಸ್ಥರಾಗಿಯೇ ಇರುತ್ತಿದ್ದ ಅವರ ಬಳಿ ಯಾರೂ ಹೋಗುತ್ತಿರಲಿಲ್ಲ. ಹೀಗೆ ವೃತ ಮಾಡದಿದ್ದರೆ ಪರಮ ಸತ್ಯದೊಂದಿಗೆ ಅನುಸಂಧಾನ ಸಾಧ್ಯವಿಲ್ಲ, ಭಕ್ತರನ್ನು ಅನುಗ್ರಹಿಸುವುದು ಸಾಧ್ಯವಿಲ್ಲ ಎಂದು ತಪಸ್ಸು ಮಾಡುತ್ತಿದ್ದರು’. ಕಾಲಕಾಲಕ್ಕೆ ಚಾತುರ್ಮಾಸಾಚರಣೆ ಸ್ವರೂಪದಲ್ಲಿ ಬದಲಾವಣೆ ಕಂಡುಬಂದಿದ್ದು ಗೃಹಸ್ಥರೂ ಕೂಡ ಚಾತುರ್ಮಾಸ್ಯ ವೃತ ಆಚರಿಸಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಹೊನ್ನಾವರ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ.;
https://chat.whatsapp.com/G9SxG7l3Wo36m72c85bSOA
Leave a Comment