ಯಲ್ಲಾಪುರ:ಮಕ್ಕಳಿಗೆ ಸರಳವಾಗಿ ಪೂರ್ವಜ್ಞಾನ ನೀಡುವ ವಿದ್ಯಾಸೇತು ಬ್ರಿಜ್ ಕೋರ್ಸ್ ಪುಸ್ತಕಗಳು ಸದುಪಯೋಗವಾಗಬೇಕು. ಪ್ರತಿ ವಿದ್ಯಾರ್ಥಿ ಈ ಪುಸ್ತಕದ ಲಾಭ ಪಡೆಯುವಂತಾಗಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ ಹೇಳಿದರು.
ಅವರು ಬುಧವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ರೋಟರಿ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿದ್ಯಾ ಸೇತು ವಿದ್ಯಾಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ತರಗತಿಗಳ ಪಾಠವನ್ನು ಪುನರ್ ಮನನ ಮಾಡಿಕೊಳ್ಳಲು ಬ್ರಿಜ್ ಕೋರ್ಸ್ ಅಗತ್ಯ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅಂತಹ ಕೋರ್ಸ್ ಮೂಲಕ ಪ್ರೋತ್ಸಾಹಿಸಲು ರೋಟರಿ ಮುಂದಾಗಿರುವುದು ಶ್ಲಾಘನೀಯ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಭವಿಷ್ಯ ರೋಟರಿ ಹಾಗೂ ಇತರ ಸಂಘಟನೆಗಳ ಶ್ರಮದಿಂದ ಉಜ್ವಲವಾಗಲಿ ಎಂದರು.

ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ವಿದ್ಯಾಸೇತುವಿನ ಸಾರ್ಥಕತೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಈ ಜವಾಬ್ದಾರಿಯನ್ನು ಹೊರೆ ಎಂದು ತಿಳಿಯದೇ ಕರ್ತವ್ಯವೆಂಬ ನೆಲೆಯಲ್ಲಿ ನಿರ್ವಹಿಸುವಂತೆ ವಿನಂತಿಸಿದರು.
ರೋಟರಿ ಕ್ಲಬ್ ನ ಸಹಾಯಕ ಪ್ರಾಂತಪಾಲಕ ಡಾ.ಕೆ.ವಿ.ಶಿವರಾಮ ಪ್ರಾಸ್ತಾವಿಕವಾಗಿ ಮಾತನಾಡಿ, ಕರೊನಾದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಉಂಟಾದ ಸಮಸ್ಯೆ ಪರಿಹಾರಕ್ಕೆ ನಮ್ಮ ಕೊಡುಗೆ ನೀಡುವ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ. ದಾನಿಗಳ ನೆರವಿನೊಂದಿಗೆ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಓದುವ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಶಿರಸಿ ರೋಟರಿ ಕ್ಲಬ್ ಅಧ್ಯಕ್ಷ ಪಾಂಡುರಂಗ ಪೈ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಎನ್.ಆರ್.ಹೆಗಡೆ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಪ್ರಭು, ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಇತರರಿದ್ದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ರವಿ ಭಟ್ಟ ಬರಗದ್ದೆ ನಿರ್ವಹಿಸಿದರು. ಶಿಕ್ಷಕ ರಾಘವೇಂದ್ರ ಹೆಗಡೆ ವಂದಿಸಿದರು.
Leave a Comment