ನನ್ನನ್ನು ಕೇಳಿದರೆ ಉತ್ತರ ಕನ್ನಡ ಜಿಲ್ಲೆಗೆ ಒಂದು ಅಖಿಲಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕೊಡಿ ಎಂದು ವಿನಂತಿಸುತ್ತೇನೆ ಪ್ರಧಾನಿಗಳೇ ಎಂದು ಮಂಗಳೂರಿನ ಹೆಸರಾಂತ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಪ್ರಧಾನಿಗಳಿಗೆ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಇತ್ತೀಚೆ ಪ್ರಧಾನಿಗಳನ್ನು ಭೇಟಿಯಾದಾಗ ಹುಬ್ಬಳ್ಳಿ-ಧಾರವಾಡಕ್ಕೆ ಒಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಬೇಕು ಎಂದು ಕೇಳಿದ್ದು ದಿಹಿಂದು.ಕಾಮ್ನಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಡಾ. ಪಿ ಕಾಮತ್ @ಕಾರ್ಡಿಯೋ೭೩ ಯಲ್ಲಿ ಹೇಳಿದ್ದಾರೆ.
ಇತ್ತೀಚೆ ಮಾನ್ಯ ಪ್ರಧಾನಮಂತ್ರಿಗಳ ಮನ್ ಕೀ ಬಾತ್ನಲ್ಲಿ ಪಾಲ್ಗೊಂಡಿದ್ದ ಡಾ. ಕಾಮತ್ ಅವರ ಸೇವೆಯನ್ನು ಪ್ರಧಾನಿಗಳು ಮುಕ್ತಕಂಠದಿAದ ಪ್ರಶಂಸಿಸಿದ ಹಿನ್ನೆಲೆಯಲ್ಲಿ ಡಾ. ಕಾಮತರ ಮಾತುಗಳು ಗಮನ ಸೆಳೆದಿವೆ. ಇದಕ್ಕೆ ಜನರ ಆಗ್ರಹವೂ ಅಗತ್ಯವಾಗಿದೆ. ಜಿಲ್ಲೆಗೆ ಟ್ರೋಮಾ ಸೆಂಟರ್ ಬೇಕು, ಮೆಡಿಕಲ್ ಕಾಲೇಜು ಆಸ್ಪತ್ರೆ ಪರಿಪೂರ್ಣವಾಗಬೇಕು, ಇತ್ಯಾದಿ ಬೇಡಿಕೆಗಳು ಬಹಳ ವರ್ಷಗಳಿಂದ ಇವೆ. ಇತ್ತೀಚೆ ಈ ಕುರಿತು ಶ್ರೀ ಧರ್ಮಸ್ಥಳ ಹೆಗ್ಗಡೆಯವರಲ್ಲಿ ವಿನಂತಿಸಿದಾಗ ಮಣಿಪಾಲ ಹತ್ತಿರವಾಗುತ್ತದೆ, ಟ್ರೋಮಾ ಸೆಂಟರ್ ಮಾಡಿದರೆ ಅವರು ಮಾಡಬಹುದು, ನಾನು ಒಂದು ಮಾತು ಹೇಳುತ್ತೇನೆ ಅಂದಿದ್ದರು.
ಡಾ. ಕಾಮತರು ಇತ್ತೀಚೆ ಉದಯವಾಣಿಯೊಂದಿಗೆ ಮಾತನಾಡುತ್ತ ಸರ್ಕಾರಿ ಮೆಡಿಕಲ್ ಕಾಲೇಜು ಆದರೂ ಎಲ್ಲ ಸೌಲಭ್ಯ ಒದಗಿಸಿಕೊಡುವುದು ರಾಜ್ಯ ಸರ್ಕಾರದಿಂದ ಸಾಧ್ಯವಾಗುವುದಿಲ್ಲ. ಸಾಕಷ್ಟು ವೈದ್ಯರ ಲಭ್ಯತೆಯೂ ಇಲ್ಲ, ಖಾಸಗಿಯವರು ಆಸ್ಪತ್ರೆಗೆ ಹಣಹೂಡಿದರೆ ನಿರೀಕ್ಷಿಸಿದ ಲಾಭ ಬರದ ಕಾರಣ ಅವರು ಹಿಂದೇಟು ಹಾಕುತ್ತಾರೆ. ಆದ್ದರಿಂದ ಭಾರತ ಸರ್ಕಾರವೇ ಮನಸ್ಸು ಮಾಡಿದರೆ ಕೆಲಸ ಸುಲಭ ಎಂದು ಹೇಳಿದ್ದರು.
ಹೃದಯಾಘಾತದ ತುರ್ತುಸಂದರ್ಭದಲ್ಲಿ ಎಂಜಿಯೋಗ್ರಾA ಮಾಡಿ ಸ್ಟಂಟ್ ಅಳವಡಿಸಿ ಜೀವ ಉಳಿಸಲು ಜಿಲ್ಲೆಯಲ್ಲಿ ವೈದ್ಯರಿಲ್ಲ, ಕ್ಯಾಥ್ ಲ್ಯಾಬ್ಗಳೂ ಇಲ್ಲ. ಆದ್ದರಿಂದ ತುರ್ತು ಒಂದು ಕ್ಯಾಥ್ ಲ್ಯಾಬ್ ಮಾಡಿಕೊಳ್ಳಿ, ಜಿಲ್ಲೆಯವರಾಗಿ ಜಿಲ್ಲೆಯ ಹೊರಗೆ ಸಾಕಷ್ಟು ಜನ ಹೃದಯ ಚಿಕಿತ್ಸೆಯ ತಜ್ಞರು ಇದ್ದಾರೆ. ನಾನೇ ಹಲವರನ್ನು ತರಬೇತಿಗೊಳಿಸಿ ಪದವಿ ಕೊಟ್ಟಿದ್ದೇನೆ, ಯಾರಾದರೂ ಬರುವಂತೆ ವಿನಂತಿಸಿಕೊಳ್ಳಿ, ಅವರೊಂದಿಗೆ ಸಹಕರಿಸಿ ಎಂದು ಡಾ. ಕಾಮತ್ ಅಭಿಪ್ರಾಯಪಡುತ್ತಾರೆ.
ನಾನು ಸುಮ್ಮನೆ ಹೇಳುತ್ತಿಲ್ಲ, ನಮ್ಮ ಸಿಎಡಿ (ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್) ಮುಖಾಂತರ ಜಿಲ್ಲೆಯ ಬಹುತೇಕ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಜನೌಷಧಿ ಕೇಂದ್ರಕ್ಕೆ ಮತ್ತು ಕೆಲವು ಖಾಸಗಿ ವೈದ್ಯರಿಗೆ, ಒಟ್ಟು ೨೭ಕ್ಕೂ ಹೆಚ್ಚು ಇಸಿಜಿ ಉಪಕರಣಗಳನ್ನು ದಾನಿಗಳ ನೆರವಿನಿಂದ ಒದಗಿಸಿದೆ.
ಇತ್ತೀಚೆ ಪ್ರಾಥಮಿಕ ಆರೋಗ್ಯ ಕೇಂದ್ರ ದೂರವಿರುವ ಹೊನ್ನಾವರ ತಾಲೂಕಿನ ಹಡಿನಬಾಳ, ಮಾವಿನಕುರ್ವಾ, ಗೇರಸೊಪ್ಪಾ ಪಂಚಾಯತಗಳಿಗೆ, ಕುಮಟಾದ ಮಿರ್ಜಾನ ಮತ್ತು ಹಿರೇಗುತ್ತಿಗಳಿಗೆ ಉಚಿತ ಇಸಿಜಿ ಉಪಕರಣ ನೀಡಿದ್ದೇವೆ. ಅಂಗನವಾಡಿ ಶಿಕ್ಷಕಿಯರಿಗೆ ಮಾತ್ರವಲ್ಲ ಅಂಬುಲೆನ್ಸ್ ಚಾಲಕರಿಗೂ ಸಿಎಡಿ ತರಬೇತಿ ನೀಡಿದೆ. ಉತ್ತರಕನ್ನಡದವರಿಗಾಗಿ ಸಿಎಡಿ ಕೋವಿಡ್ ಸಮಯದಲ್ಲೂ ಸೇವೆ ನೀಡಿದೆ. ಇಷ್ಟಾದರೂ ತುರ್ತು ಸೇವೆ ದೊರೆಯದೆ ಹಲವು ಜೀವಗಳು ಮಾರ್ಗಮಧ್ಯೆಯಲ್ಲಿ ಹೊರಟು ಹೋಗುವುದನ್ನು ನೋಡಲಾಗುತ್ತಿಲ್ಲ.
ಜಿಲ್ಲೆಗೆ ಬೇಗ ವೈದ್ಯಕೀಯ ಸೌಲಭ್ಯ ಸಿಗಲಿ ಎಂಬ ಕಾರಣಕ್ಕಾಗಿ ಈ ಮಾತು ಹೇಳಿದ್ದೇನೆ ಎಂದಿದ್ದಾರೆ. ನೌಕಾನೆಲೆ, ವಾಣಿಜ್ಯ ಬಂದರು, ಅಣುವಿದ್ಯುತ್ ಸ್ಥಾವರ, ಜಲವಿದ್ಯುತ್ ಯೋಜನೆಗಳಿಗಾಗಿ ಸಾಕಷ್ಟು ಆಸ್ತಿಪಾಸ್ತಿ ಕಳೆದುಕೊಂಡ ದೊಡ್ಡ ಸಮುದಾಯ ಇರುವುದರ ಜೊತೆಯಲ್ಲಿ ಅಡಿಕೆ, ಏಲಕ್ಕಿ, ಕಾಳುಮೆಣಸು ಮೊದಲಾದ ಹಣದ ಬೆಳೆ ಬೆಳೆಯುವ, ಪ್ರವಾಸೋದ್ಯಮದ ಕೇಂದ್ರವಾಗುತ್ತಿರುವ ಉತ್ತರಕನ್ನಡಕ್ಕೆ ಒಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಭಾರತ ಸರ್ಕಾರ ನೀಡಿದರೆ ಜಿಲ್ಲೆ ಸಹಿತ ಸುತ್ತಮುತ್ತಲಿನ ಜಿಲ್ಲೆಗಳಿಗೂ ಅನುಕೂಲವಾಗಲಿದೆ.
Leave a Comment