ಯಲ್ಲಾಪುರ: ಪಕ್ಷ ಅವಕಾಶ ಕೊಟ್ಟರೆ ಯಲ್ಲಾಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಕಾಂಗ್ರೆಸ್ ಯುವ ಮುಖಂಡ ಪ್ರಶಾಂತ ದೇಶಪಾಂಡೆ ಹೇಳಿದರು.

ಅವರು ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದರು. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿರಬೇಕು, ಪಕ್ಷವನ್ನು ಬಲಪಡಿಸುವ ಕರ್ತವ್ಯ ನಮ್ಮದಾಗಬೇಕು. ಕ್ಷೇತ್ರದಲ್ಲಿ ಪಕ್ಷ ಮತ್ತೆ ಗಟ್ಟಿಯಾಗಿ ನೆಲೆಯೂರುವಂತೆ ಮಾಡಲು ಪಕ್ಷ ಅವಕಾಶ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಇನ್ನೂ ಪ್ರಗತಿಯಲ್ಲಿದೆ. ಬಿಜೆಪಿ ಹೊಸದಾಗಿ ಏನೂ ಮಾಡಿಲ್ಲ. ಕರೊನಾ ಸಂದರ್ಭದಲ್ಲಿ ಅಗತ್ಯವಾದ ಔಷಧಿ, ಪಿಪಿಇ ಕಿಟ್, ಆಕ್ಸಿಮೀಟರ್ ಇತರ ವಸ್ತುಗಳನ್ನು ನಾವು ಒದಗಿಸಿದ್ದೇವೆ. ಸರ್ಕಾರ ಮಾಡಬೇಕಾದ ಕೆಲಸವನ್ನು ನಾವು ಮಾಡಿದ್ದೇವೆ ಎಂದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡವರ ಬದುಕು ಸಂಕಷ್ಟದಲ್ಲಿದ್ದು, ಬಿಜೆಪಿ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು .
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕಾರ, ಎಸ್.ಸಿ.ಸೆಲ್ ಜಿಲ್ಲಾಧ್ಯಕ್ಷ ಬಸವರಾಜ, ಜಿಲ್ಲಾ ವಕ್ತಾರ ದೀಪಕ ದೊಡ್ಡೂರು, ಪ್ರಮುಖರಾದ ಟಿ.ಸಿ.ಗಾಂವ್ಕಾರ, ಎನ್.ಕೆ.ಭಟ್ಟ ಮೆಣಸುಪಾಲ, ಎಂ.ಎಸ್.ನಾಯ್ಕ, ಪೂಜಾ ನೇತ್ರೆಕರ್, ಸರಸ್ವತಿ ಗುನಗಾ, ಅಣ್ಣಪ್ಪ ನಾಯ್ಕ, ದಿಲೀಪ ರೊಖಡೆ, ಲಾರೆನ್ಸ್ ಸಿದ್ದಿ, ಶಿವಾನಂದ ನಾಯ್ಕ ಇತರರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅನಿಲ್ ಮರಾಠೆ, ಯುವ ಮುಖಂಡ ಪ್ರಶಾಂತ ಸಭಾಹಿತ ನಿರ್ವಹಿಸಿದರು.
Leave a Comment