ಯಲ್ಲಾಪುರ ಪಟ್ಟಣದ ಬಾಳಗಿಮನೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿ.ಡಿ.ಪಿ.ಐ. ದಿವಾಕರ ಶೆಟ್ಟಿ ವೃಕ್ಷಾರೋಪಣ ಮಾಡುವ ಮೂಲಕ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಿ, ಶುಭ ಕೋರಿದರು.
ನಂತರ ನಡೆದ ಸಭೆಯನ್ನು ಅಕ್ಷರ ದಾಸೋಹ ಯೋಜನೆಯ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ ಉಧ್ಘಾಟಿಸಿ ಮಾತನಾಡಿ, ನಿತ್ಯ ಜೀವನದಲ್ಲಿ ನಾವು ಸಮತೋಲಿತ, ಪೌಷ್ಟಿಕ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ಉತ್ತಮವಾದ ಆಹಾರವೂ ದೊರೆಯಬೇಕು .
ಎಲ್ಲ ರೀತಿಯ ಪೋಷಕಾಂಶಗಳಿಂದ ಕೂಡಿದ ಸತ್ವಯುತ ಆಹಾರವನ್ನು ಸೇವಿಸುವುದನ್ನು ಎಳೆವೆಯಲ್ಲಿಯೇ ರೂಢಿಸಿಕೊಳ್ಳಬೇಕು.
ಆರೋಗ್ಯ ರಕ್ಷಣೆಯತ್ತ ಆದ್ಯತೆ ನೀಡಬೇಕು. ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅನೇಕ ರೀತಿಯ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. ಸದ್ಯದಲ್ಲಿಯೇ ಮಕ್ಕಳ ಆರೋಗ್ಯಕ್ಕೆ ಇನ್ನಷ್ಟು ಪೂರಕವಾಗುವಂತೆ ಶಾಲೆಗಳಿಗೆ ಸಾರವರ್ಧಿತ ಅಕ್ಕಿಯನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯವಂತ ವ್ಯಕ್ತಿಗಳಾಗುವ ಮೂಲಕ ಸುಸ್ಥಿರ ಸಮಾಜವನ್ನು ರೂಪಿಸಲು ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಉತ್ತಮವಾದ ಆಹಾರ ಅಗತ್ಯವಾಗಿದೆ. ಜಂಕ್‍ಫುಡ್‍ಗಳನ್ನು ಸೇವಿಸಬಾರದು. ಹಸಿರು ತರಕಾರಿ, ಸತ್ವಯುತ ಆಹಾರಗಳನ್ನು ಸೇವಿಸಬೇಕು. ಈ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಾ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಬಿ.ಆರ್.ಸಿ.ಗಳಾದ ಸಂತೋಷ ಕುಮಾರ್ ಜಿಗಳೂರು, ಪ್ರಶಾಂತ ಪಟಗಾರ, ಎಸ್.ಪಿ. ವರ್ಣೆಕರ್, ಬಿ.ಆರ್.ಪಿ.ಗಳಾದ ಸಂತೋಷ ನಾಯ್ಕ, ಉಷಾ ನಾಯ್ಕ, ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ದಬ್ಲಿ, ಎಸ್.ಡಿ.ಎಂಸಿ.ಅಧ್ಯಕ್ಷ ಅಬ್ದುಲ್ ಕರೀಂ ಶೇಕ್, ಉಪಾಧ್ಯಕ್ಷೆ ವೇದಾವತಿ ಬಾಂದೇಕರ್ ಮುಂತಾದವರು ಇದ್ದರು.
ಮಖ್ಯ ಶಿಕ್ಷಕ ಗಜಾನನ ನಾಯ್ಕ ಸ್ವಾಗತಿಸಿದರು. ರತನ್ ನಾಯ್ಕ ನಿರೂಪಿಸಿದನು. ಸಹಶಿಕ್ಷಕಿ ಸವಿತಾ ನಾಯಕ ವಂದಿಸಿದರು.
Leave a Comment