
ಯಲ್ಲಾಪುರ: ಯಕ್ಷಗಾನ ಸೇರಿದಂತೆ ಕಲೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬೇಕು. ನಮ್ಮ ಪ್ರಾಚೀನ ಕಲೆಯಾದ ಯಕ್ಷಗಾನದ ಶ್ರೇಷ್ಠತೆಯನ್ನು ಮನಗಾಣಬೇಕು. ಭಗವಂತನ ಅರಿವಿಗೆ ಪರಾಭಕ್ತಿ ಮುಖ್ಯ. ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು. ಪೌರಾಣಿಕ ಕಥೆಯ ಮೂಲಕ ನಮಗೆ ಭಕ್ತಿಯ ಸಿದ್ದಾಂತವನ್ನು ಪರಿಚಯಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ಅವರು ಸೋಮವಾರ ಗಾಂಧಿ ಕುಠಿರದಲ್ಲಿ ನಡೆದ 35 ನೇ ವರ್ಷದ ಮೂರನೇ ದಿನದ ಸಂಕಲ್ಪ ಉತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯಕ್ಷಗಾನ ಭಕ್ತಿಯನ್ನು ಪ್ರಧಾನವಾಗಿ ಪ್ರತಿಪಾದಿಸುತ್ತದೆ. ಉತ್ಸವ ಯಕ್ಷಗಾನಕ್ಕೆ ಒತ್ತು ನೀಡುವ ಮೂಲಕ ಭಕ್ತಿಯ ಸಂಚಾರ ಮಾಡಿಸಿದೆ. ಎಲ್ಲಿ ಆಧ್ಯಾತ್ಮಿಕ ಸಂಗತಿಗಳಿವೆಯೋ ಆ ವಿಷಯ ಹೆಚ್ಚು ಗಟ್ಟಿಯಾಗಿ ನಿಲ್ಲುತ್ತದೆ. ಬಾಹ್ಯ ಸೌಂದರ್ಯಕ್ಕೆ ಮಾರು ಹೋಗದೇ ಮೌಲ್ಯಯುತ ವಿಷಯಕ್ಕೆ ನಮ್ಮ ಮನಸ್ಸು ಚಿಂತಿಸುವಂತಾಗಬೇಕು. ನಮ್ಮ ಬದುಕು ಆಧ್ಯಾತ್ಮಿಕ ಮೌಲ್ಯದ ಕಡೆಗೆ ಸಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ಅಜಿತ್ ಬೆಳ್ಳೆಕೇರಿ, ಗೋಪಾಲಕೃಷ್ಣ ಗಾಂವ್ಕಾರ್, ಎಂ.ಆರ್.ಹೆಗಡೆ, ಡಿ.ಶಂಕರ ಭಟ್ಟ, ಸುಬ್ರಹ್ಮಣ್ಯ ಚಿಟ್ಟಾಣಿ, ಡಾ.ರವಿ ಭಟ್ಟ, ನಾರಾಯಣದಾಸ್, ಉಪಸ್ಥಿತರಿದ್ದರು. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕಗೈದರು. ಪದ್ಮಾ ಪ್ರಮೋದ ಹೆಗಡೆ ಪ್ರಾರ್ಥಿಸಿದರು. ಚಂದ್ರಕಲಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.
Leave a Comment