
ಯಲ್ಲಾಪುರ: ಕಲಾವಿದರನ್ನು ಪೋಷಿಸಬೇಕಾದರೆ ಕಲೆಯನ್ನು ಗೌರವಿಸಬೇಕು. ಜನರಲ್ಲಿ ಆಸಕ್ತಿ ಮತ್ತು ಸಂಸ್ಕೃತಿ ಕುರಿತಾದ ಜ್ಞಾನ ಅವಶ್ಯ. ಸನಾತನ ಪದ್ಧತಿ ಸಂಸ್ಕೃತಿ ಭಾರತೀಯ ಪರಂಪರೆ ನಮ್ಮ ದೇಶದ ಉಳಿವಿಗೆ ಕಾರಣವಾಗಿದೆ. ಬುಟಕಟ್ಟು ಸಂಸ್ಕೃತಿ ಮನುಕುಲದ ವಿಶೇಷತೆಗಳಲ್ಲೊಂದಾಗಿದೆ. ಇದು ಜೀವನ ಆಧಾರವಾಗಿದ್ದು ಮನುಷ್ಯ ನಾಗರೀಕತೆಯ ಒಂದು ವಿಶೇಷ ಅಂಗವಾಗಿ ಬದುಕುತ್ತಿದ್ದಾನೆ. ಇದು ಜ್ಯಾತ್ಯಾತೀತ ರಾಷ್ಟ್ರವಾಗಿರುವಾಗ ನಾವೆಲ್ಲ ಒಂದಾಗಿರಬೇಕು. ನಮ್ಮ ಸಂಸ್ಕೃತಿ ಉಳಿದರೆ ನಮ್ಮ ದೇಶ ಉಳಿಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ನುಡಿದರು.
ಅವರು ತೇಲಂಗಾರರಂಗ ಮಂದಿರದಲ್ಲಿ ವನಸಿರಿ ಕಲಾ ಕೂಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆದ ಸಿರಿಗನ್ನಡ ಸಂಭ್ರಮ, ಎಸ್.ಟಿ.ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರಿದ ಅವು ಸರ್ಕಾರ ನಮ್ಮ ತುಟಿ, ಬಣ್ಣ, ಮೂಗು, ಕೂದಲು ನೋಡಿ ಗುರುತಿಸುವುದಿಲ್ಲ, ಬುಡಕಟ್ಟು ಸಂಸ್ಕೃತಿ ಮತ್ತು ವನವಾಸಿಗಳ ಕಾರ್ಯ ನೋಡಿ ಗುರಿತಿಸುತ್ತದೆ. ದುಡ್ಡಿನಲ್ಲಿ ಮಾತ್ರ ಲೆಕ್ಕಾಚಾರ ಹಾಕುವವರಲ್ಲಿ ಸಂಸ್ಕಾರ ಬೆಳೆಯುವುದಿಲ್ಲ. ಇದು ಕೇವಲ ವ್ಯವಹಾರ ಮಾತ್ರ ಅನಿಸಿಕೊಳ್ಳುತ್ತದೆ. ಮನುಕುಲಕ್ಕೆ ಬೇಕಾದ ಸಂಸ್ಕೃತಿ ಬಿಟ್ಟು ರೋಮ್ ಸಂಸ್ಕೃತಿ ಆಚರಿಸುವುದು ಸರಿಯಲ್ಲ, ಮತಾಂತರದ ಪಿಡುಗು ಹೆಚ್ಚಾಗಿದೆ. ಈಗ ಅಚ್ಚೇ ದಿನ ಬಂದಿದೆ, ಅನೇಕ ಸಿದ್ಧಿ ಪ್ರತಿಭಾವಂತರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ತುಳಸಿ ಗೌಡ, ಸಾಲುಮರ ತಿಮ್ಮಕ್ಕ ಮುಂತಾದ ಸಾಧಕರನ್ನು ಸರ್ಕಾರ ಗುರುತಿಸಿದೆ. ಹಿಂದುಳಿದ ಜನರನ್ನು ಗುರಿತಿಸಿ ಅಚ್ಛೇದಿನ ತಂದಿರುವುದು ಸ್ವಾಗತಾರ್ಹ. ಕತ್ತಲೆಯಲ್ಲಿರುವ ಸಾಧಕರನ್ನು ಗುರುತಿಸುವುದು ಈ ನಾಡಿನ ಸಂಸ್ಕೃತೀಯ ಪ್ರತೀಕವಾಗಿದೆ. ಎಸ್.ಟಿ.ಸಮುದಾಯದ ಈ ವನಸಿರಿ ಕಲಾ ಕೂಟ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಂಡಿದೆ. ಇದರ ಅಧ್ಯಕ್ಷ ಶಿವಾನಂದ ಸಿದ್ಧಿ ಕೂಡರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಮೂಲ ಸಂಸ್ಕೃತಿ ಉಳಿಸುತ್ತಿರುವ ಈ ಕಲಾ ಕೂಟ ನಿಜವಾಗಿ ಅಭಿನಂದನಾರ್ಹ ಎಂದರು.
ಮುಖ್ಯ ಅತಿಥಿಗಳಾಗಿ ಆದರ್ಶ ಸೇವಾ ಸಹಕಾರಿ ಸಂಘದ ನಾಗೇಂದ್ರ ಹೆಗಡೆ ಕೋಣೆಮನೆ, ಗ್ರಾ.ಪಂ.ಸದಸ್ಯ ಜಿ.ಆರ್.ಭಾಗ್ವತ, ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ, ವನಸರಿ ಕಲಾ ಕೂಟದ ಅಧ್ಯಕ್ಷ ಶಿವಾನಂದ ಸಿದ್ದಿ ಸಾಂಸ್ಕೃತಿಕ ಪರಂಪರೆಗಳ ಕುರಿತು ನುಡಿದರು.
ಹಿರಿಯ ಜಾನಪದ ಕಲಾವಿದ ನಾರಾಯಣ ಸಿದ್ಧಿ ವೇದಿಕೆಯಲ್ಲಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ತೇಲಂಗಾರ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ತಮ್ಮಣ್ಣ ಭಟ್ಟ ಮತ್ತಿಹಕ್ಕಲ ವಹಿಸಿದ್ದರು. ಅವರು ಮಾತನಾಡಿ ಈ ಜಿಲ್ಲೆ ವಿಶೇಷವಾದ ಸಿದ್ಧಿ ಸಂಸ್ಕೃತಿಯನ್ನು ವನಸಿರಿ ಕಲಾ ಕೂಟ ಉಳಿಸುತ್ತಿದೆ. ನಮ್ಮ ಸಹಕಾರವೂ ಇದೆ ಎಂದರು. ಈ ಸಂದರ್ಭದಲ್ಲಿ ಮೈತ್ರಿ ಕಲಾ ಬಳಗ ತೇಲಂಗಾರ, ವನಸಿರಿ ಕಲಾ ಕೂಟ ಚಿಮನಳ್ಳಿ, ಸಮಸ್ತ ಊರ ನಾಗರೀಕರ ಪರವಾಗಿ ಜಿ.ಆರ್.ಭಾಗ್ವತ, ಶಾಂತರಾಮ ಸಿದ್ಧಿಯವರನ್ನು ಸನ್ಮಾನಿಸಿದರು. ವನಸಿರಿ ಕಲಾ ಕೂಟದ ಸದಸ್ಯಚಂದ್ರಶೇಖರ ಸಿದ್ದಿ ಎಲ್ಲರನ್ನೂ ಸ್ವಾಗತಿಸಿದರು. ಪ್ರಾರಂಭದಲ್ಲಿ ಶಿವಾನಂದಸಿದ್ಧಿ ಪ್ರಾರ್ಥನೆ ಗೀತೆ ಹಾಡಿದರು. ಮೈತ್ರಿ ಕಲಾ ಬಳಗದ ಕಾರ್ಯದರ್ಶಿ ಮಂಜುನಾಥ ಗಾಂವ್ಕರ ಮೂಲೆಮನೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ನಂತರ ಚಂದ್ರಶೇಖರ ಸಿದ್ಧಿ ಸಂಗಡಿಗರಿಂದ ನಾಟಕ ಮನೋಜ್ಞವಾಗಿ ನಡೆಯಿತು. ಶಿವಾನಂದ ಸಿದ್ಧಿ ಸಂಗಡಿಗರಿಂದ ಸಂಗ್ಯಾ ಬಾಳ್ಯ ಯಕ್ಷಗಾನ ಉತ್ತಮ ಹಾಡು ಲಯ ಬದ್ಧಕುಣಿತ, ಸಾಂದರ್ಭಿಕ ಕಥೆಯೊಡನೆ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಕನ್ನಡದ ಕಂಪು ಬೀರುವ ಕನ್ನಡ ಗೀತೆಗಳು, ಭಜನೆ, ನೃತ್ಯ ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.
Leave a Comment