
ಯಲ್ಲಾಪುರ : ಕಾಂಗ್ರೆಸ್ಸಿಗರಂತೆ,ಬೇಕಾಬಿಟ್ಟಿ ಇತರರ ಬಗ್ಗೆ ಮಾತನಾಡುವ ಯಾರನ್ನೂ ಟೀಕಿಸುವ ಅಗತ್ಯತೆ ನನಗಿಲ್ಲ. ಜನರೇ ಅವರಿಗೆ ಸರಿಯಾದ ಉತ್ತರ ನೀಡುತ್ತಾರೆ. ಇನ್ನು ಕನಿಷ್ಟ ಇಪ್ಪತ್ತೈದು ವಷಗಳಷ್ಟು ಕಾಲ ಭಾರತದಲ್ಲಿ ಕಾಂಗ್ರೆಸ್ಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಪಕ್ಷ ಒಂದು ಮುಳುಗುವ ಹಡಗಿನಂತಾಗಿದೆ. ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದ ಈಶ್ವರೀ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಸ್ವರಾಜ್ ಸಮಾವೇಶದಲ್ಲಿ ಭಾಗವಹಿಸಿ

ಮಾತನಾಡಿದ ಅವರು, ಈಗ ಬರಲಿರುವ ವಿಧಾನ ಪರಿಷತ್ ಚುನಾವಣೆಯು ಮುಂಬರಲಿರುವ ಎಲ್ಲ ಚುನಾವಣೆಗಳನ್ನು ಗೆಲ್ಲಲು ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ಪ್ರತಿ ಸದಸ್ಯನೂ ಸಹ ತಾನೇ ಚುನಾವಣೆಗೆ ನಿಂತಿರುವ ಅಭ್ಯರ್ಥಿಯಂತೆ ಕಾರ್ಯ ನಿರ್ವಹಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಈ ಬಾರಿ ಚುನಾವಣೆಗೆ ಉತ್ತರಕನ್ನಡ ಕ್ಷೇತ್ರದಲ್ಲಿ 2908 ಮತಗಳಿದ್ದು, ಕನಿಷ್ಠ 2000 ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕರ್ತವ್ಯ ನಿಮ್ಮೆಲ್ಲರ ಮೇಲಿದೆ. ಯಲ್ಲಾಪುರದಿಂದ ಆರಂಭವಾಗಿರುವ ಈ ಯಾತ್ರೆಯಿಂದ ಕರ್ನಾಟಕದಾದ್ಯಂತ ಬಿಜೆಪಿ ಗೆಲುವನ್ನು ಕಾಣುವಂತಾಗಲಿ. ಆದ್ದರಿಂದ ಇಂದಿನಿಂದಲೇ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಪರ ಕಾರ್ಯ ನಿರ್ವಹಿಸಿ ಬಿಜೆಪಿಯ ಗೆಲುವನ್ನು ಖಚಿತಪಡಿಸೋಣ.ಈ ಚುನಾವಣೆಯ ನಂತರವೂ ನಾನು ರಾಜ್ಯದ ಉದ್ದಗಲಕ್ಕೆ ಸಂಚರಿಸಿ ಪಕ್ಷ ಸಧೃಢಪಡಿಸುವ ಕಾರ್ಯ ಮಾಡುತ್ತೇನೆ .ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಮತ್ತೊಮ್ಮೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿ ಆಡಳಿತ ಬರುವಂತೆ ನಾವೆಲ್ಲ ಶ್ರಮಿಸೋಣ ಎಂದರು.
ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ, ಮಾತನಾಡಿ ಉತ್ತರ ಕನ್ನಡದಲ್ಲಿ 1984 ರಿಂದ ಈ ವರೆಗೂ ಒಮ್ಮೆಯೂ ಸಹ ಬಿಜೆಪಿ ವಿಧಾನ ಪರಿಷತ್ಗೆ ಆಯ್ಕೆಯಾಗಿಲ್ಲ. ಈ ಬಾರಿ ಕಾಂಗ್ರೆಸ್ ಕೈಯಿಂದ ಈ ಸ್ಥಾನವನ್ನು ಪಡೆದೇ ಪಡೆಯುತ್ತೇವೆ ಎಂಬ ಭರವಸೆಯನ್ನು ನಾನು ಯಡಿಯೂರಪ್ಪವನವರ ಉಪಸ್ಥಿತಿಯಲ್ಲಿ ನಮ್ಮ ಸರ್ಕಾರಕ್ಕೆ ಕೊಡುತ್ತೇನೆ. ಈ ಚುನಾವಣೆಗೆ ಕಾಂಗ್ರೆಸ್ನಿಂದ ಒಂದು ಅಭ್ಯರ್ಥಿಯನ್ನು ಸಹ ಸರಿಯಾಗಿ ಹುಡುಕಲು ಸಾಧ್ಯವಾಗುತ್ತಿಲ್ಲ. ಅಂತಹುದರಲ್ಲಿ ಬಿಜೆಪಿಯಿಂದ 24 ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅವರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಸಹ ಬಿಜೆಪಿಯನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ನಮ್ಮ ಕಾರ್ಯಕರ್ತರೆಲ್ಲರೂ ಸಹ ಕಾರ್ಯ ನಿರ್ವಹಿಸುಬೇಕೆಂದು ಮನವಿ ಮಾಡುತ್ತೇನೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಾರಿಗೆ ಸಚಿವ ಶ್ರೀರಾಮುಲು, ರಾಜ್ಯದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ವಿನಾಕಾರಣ ಹಾರಾಡುತ್ತಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯನವರು ಬಿಜೆಪಿ ವಿರುದ್ಧದ ಅಲೆ ಭಾರತದಲ್ಲಿ ಪ್ರಾರಂಭವಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ವೇದಿಕೆಯಲ್ಲಿಂದು ಅವರಿಗೆ ನಾನು ಸವಾಲನ್ನು ಹಾಕುತ್ತಿದ್ದೇನೆ. 2023ರ ವರೆಗೆ ಕಾಯಬೇಕಿಲ್ಲ, ಇದೇ ವಿಧಾನ ಪರಿಷತ್ ಚುನಾವಣೆಯಲ್ಲಿ ಅವರು ಸರಿಯಾದ ಉತ್ತರವನ್ನು ಪಡೆಯಲಿದ್ದಾರೆ. ನಮ್ಮಲ್ಲಿ ಪಾಸ್ ಮಾಡಲಾದ ವಿಧೇಯಕಗಳನ್ನು ವಿಧಾನ ಪರಿಷತ್ಗೆ ಒಯ್ದಾಗ ಅವಗಳನ್ನು ತಡೆಹಿಡಿಯುವ ಕಾರ್ಯವನ್ನು ಕಾಂಗ್ರೆಸ್ ಶಾಸಕರು ಮಾಡುತ್ತಿದ್ದರು. ಅಭಿವೃದ್ಧಿ ಕಾರ್ಯಗಳಿಗೆ ಈ ರೀತಿ ಮುಂದೆ ಯಾವುದೇ ಅಡೆತಡೆಗಳು ಉಂಟಾಗಬಾರದು ಎಂದರೆ ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಬಹುಮತ ಹೊಂದುವಂತೆ ಮಾಡುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ ಅವರು ಇತ್ತೀಚೆಗೆ ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದಿದ್ದರು. ಆದರೆ ಅವರ ತಟ್ಟೆಯಲ್ಲಿ ಕತ್ತೆ ಬಿದ್ದಿರುವುದೇ ಅವರಿಗೆ ಕಾಣದಾಗಿದೆ ಎಂದರು .

ಬಿಜೆಪಿ ರಾಜ್ಯ ಪ್ರಧಾನ ಕಾಯದರ್ಶಿ ಎನ್. ರವಿಕುಮಾರ ಈ ಬಾರಿ ಒಬ್ಬ ಬಿಜೆಪಿ ಸದಸ್ಯ ಅಯ್ಕೆಯಾಗುವುದು ಖಚಿತ ಎಂದು ಈ ಸಭೆಯೇ ಸೂಚಿಸುತ್ತದೆ ಎಂದು, ಪಕ್ಷದ ಸಾಧನೆಗಳ ಬಗ್ಗೆ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಶಾಸಕ ಸುನೀಲ್ ನಾಯ್ಕ, ಶಾಸಕ ದಿನಕರ ಶೆಟ್ಟಿ, ಶಾಸಕಿ ರೂಪಾಲಿ ನಾಯ್ಕ, ವಾ.ಕ.ರಾ.ರ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ್, ವಿ. ಪ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ, ಮಾಜಿ ಶಾಸಕ ಸುನೀಲ್ ಹೆಗಡೆ, ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್, ಸಹ ಪ್ರಭಾರಿ ಎನ್.ಎಸ್. ಹೆಗಡೆ, ಜಿಲ್ಲಾ ಕಾರ್ಯದರ್ಶಿ ಭಾರತಿ ಜಂಬಗಿ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಅಜಿತ್ ಹೆಗಡೆ, ಮೋಹನ ಲಿಂಬಿಕಾಯಿ, ಜಿಲ್ಲೆಯ 14 ಮಂಡಲಗಳ ಅಧ್ಯಕ್ಷರು, ಮುಂತಾದವರು ವೇದಿಕೆಯಲ್ಲಿದ್ದರು.ಮಹಿಳಾ ಮೋರ್ಚಾ ಸಮಿತಿಯ ರೇಖಾ ಭಟ್ ವಂದೇ ಮಾತರಂ ಹೇಳಿದರು.ಡಾ. ರವಿ ಭಟ್ ಬರಗದ್ದೆ ನಿರ್ವಹಿಸಿದರು. ಇದೆ ಸಂದರ್ಭದಲ್ಲಿ ವಿವಿಧ ತಾಲೂಕಿನ ಪ್ರಮುಖರು ಬಿಜೆಪಿ ಪಕ್ಷ ಕ್ಕೆ ಸೇರ್ಪಡೆ ಗೊಂಡವರನ್ನು ಪಕ್ಷದ ಶಾಲು ನೀಡಿ ಬರಮಾಡಿಕೊಳ್ಳಲಾಯಿತು.
ಬಾಕ್ಸ್ : ವೇದಿಕೆಯಲ್ಲಿದ್ದ ಅತಿಥಿಗಳ ಪೈಕಿ ರಾಜ್ಯ ಮೀನುಗಾರರ ಪ್ರಕೋಷ್ಠದ ಉಪಾಧ್ಯಕ್ಷ ಗಣಪತಿ ಉಳ್ವೇಕರ್ ಒಬ್ಬರಿಗೇ ಸಭೆಯನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡಿದ್ದು ಜಿಲ್ಲೆಯಲ್ಲಿ ಅವರಿಗೇ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂಬುದನ್ನು ಸ್ಪಷ್ಟಪಡಿಸಿತ್ತು. ಇದಕ್ಕೆ ಒತ್ತು ನೀಡುವಂತೆ ಇಂದು ಸಂಜೆ ಅಥವಾ ನಾಳೆ ಟಿಕೆಟ್ ಯಾರಿಗೆಂದು ಪಕ್ಷ ಪ್ರಕಟಿಸುತ್ತದೆ. ನಿಮಗೆ ಈಗಾಗಲೇ ಸುಳಿವು ಸಿಕ್ಕರಬಹುದು ಎಂಬ ಯಡಿಯೂರಪ್ಪನವರ ಮಾತುಗಳು ಅನುಮಾನವನ್ನು ಖಚಿತಪಡಿಸುವಂತಿತ್ತು.
Leave a Comment