ಯಲ್ಲಾಪುರ: ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಪರಿಶೀಲನೆಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗ ಎಮ್. ಭೇಟಿ ನೀಡಿದರು.

ಇತ್ತೀಚೆಗೆ ಮಳೆಯಿಂದಾಗಿ ತೀರ್ವ ಹಾನಿಗೊಳಗಾಗಿ ಗ್ರಾ.ಪಂ.ಸ್ಥಳೀಯ ಸದಸ್ಯರು ಮತ್ತು ಜನರ ಸಹಕಾರದಿಂದ ಗ್ರಾ.ಪಂ.ಸಹಯೋಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ತುಡುಗುಣಿಯಿಂದ ಸೂರಿಮನೆಗೆ ಹೋಗುವ ಮಾರ್ಗವನ್ನು ಅವರು ಮೊದಲು ವೀಕ್ಷಣೆ ಮಾಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜನರಿಗೆ ಮಾರ್ಗ ಸುಗಮವಾಗುವಂತೆ ಮಾಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ, ಮಾರ್ಗದರ್ಶನ ನೀಡಿದರು.
ನಂತರ ಇತ್ತೀಚೆಗಷ್ಟೇ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾದ ಗ್ರಾಮ ಪಂಚಾಯತ ಗ್ರಂಥಾಲಯಕ್ಕೆ ಭೇಟಿಯಿತ್ತು ಅಲ್ಲಿನ ಅಚ್ಚುಕಟ್ಟು ತನ ಮತ್ತು ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ತಾವು ಈಗಾಗಲೇ ಜಿಲ್ಲಾ ಪಂಚಾಯತದಿಂದ ಮಂಜೂರಿ ಮಾಡಿರುವ ಒಂದೂವರೆ ಲಕ್ಷ ರೂಪಾಯಿಗಳ ಅನುದಾನದಿಂದ ಕಂಪ್ಯೂಟರ್ ಮತ್ತು ಗ್ರಂಥಾಲಯಕ್ಕೆ ಬೇಕಾದ ಅವಶ್ಯ ವಸ್ತುಗಳನ್ನು ಕೂಡಲೇ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ನಂತರ ಉಮ್ಮಚ್ಗಿ ಮತ್ತು ಸಂಕದಗುಂಡಿ ಊರಿಗಳಿಗೆ ಕುಡಿಯುವ ನೀರು ಪೂರೈಸಲು ಜನಜೀವನ ಮಿಶನ್ ಯೋಜನೆ ಅಡಿಯಲ್ಲಿ ನಡೆಸಲಾಗುತ್ತಿರುವ ಸುಮಾರು ಎಪ್ಪತ್ತು ಲಕ್ಷ ರೂಪಾಯಿಗಳ ಕಾಮಗಾರಿಯನ್ನು ಪರಿಶೀಲಿಸಿ ಕೆಲಸ ತೀವ್ರಗತಿಯಲ್ಲಿ ನಡೆಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅಶೋಕ ಬಂಟ, ಜೆ.ಜೆ.ಎಂ.ಕಾರ್ಯ ನಿರ್ವಾಹಕ ಅಭಿಯಂತರ ರಾಜೇಶ್ವರಿ, ಉಮ್ಮಚ್ಗಿ ಗ್ರಾ.ಪಂ. ಪಿ.ಡಿ.ಒ. ಶ್ರೀಧರ ಪಟಗಾರ, ಇಂಜಿನಿಯರ್ ಗಳಾದ ಸುಷ್ಮಾ,ಓಂಕಾರ, ಗುತ್ತಿಗೆದಾರರಾದ ಗೋವಿಂದ ಬಸಾಪೂರ, ಮಂಜು ಮೊಗೇರ, ರಾಜೇಶ ಪೂಜಾರಿ ಮೊದಲಾದವರಿದ್ದರು
Leave a Comment