
ಯಲ್ಲಾಪುರ : ಇತ್ತೀಚೆಗೆ ಇಹಲೋಕ ತ್ಯಜಿಸಿದ ವಿದ್ವಾಂಸರಾದ ಡಾ. ಕೆ.ಎಸ್. ನಾರಾಯಣಾಚಾರ್ಯರು, ಹರಿದಾಸರಾದ ನೀವಣಿ ಗಣೇಶ ಭಟ್ಟರು ಸಮಾಜಕ್ಕೆ ಹೊಸ ಉತ್ತಮ ಸಂದೇಶಗಳ ಮೂಲಕ ಬದುಕಿನ ಅರ್ಥವನ್ನು ಸಾರಿದ್ದಾರೆ. ಅವರಿಬ್ಬರ ಸರಳತೆಯ ಸಾಧನೆಗೆ ಅನಂತ ನಮನಗಳು. ಅವರ ಸಾರ್ಥಕತೆಯ ಬದುಕನ್ನು ಮಾತಿನಲ್ಲಿ ತಿಳಿಸಿಲು ಸಾಧ್ಯವಿಲ್ಲ. ಕೇವಲ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅವಳಿಡಿಸಿಕೊಂಡು, ಉತ್ತಮ ಬದುಕಿನೆಡೆಗೆ ಸಾಗುವುದೇ ನಾವು ಅವರಿಗೆ ಸಲ್ಲಿಸುವ ನಮನಗಳಾಗಿವೆ ಎಂದು ಪಂಚಾಯತ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಹಾಗೂ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ದೇವಾಲಯದ ಸಭಾಭವನದಲ್ಲಿ ನಡೆದ ಡಾ.ಕೆ.ಎಸ್.ನಾರಾಯಣಾಚಾರ್ಯರು ಹಾಗೂ ನೀವಣಿ ಗಣೇಶ ಭಟ್ಟರ ಕುರಿತ ನುಡಿ-ಗಾನ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಎಂ.ಸುಬ್ರಹ್ಮಣ್ಯ ಮಾತನಾಡಿ, ಹಲವಾರು ವರ್ಷ ಗಳಿಂದ ನಾರಾಯಣಾಚಾರ್ಯರೊಂದಿಗೆ ಒಡನಾಟ ಹೊಂದಿದ್ದೇನೆ. ಅವರು ವೇದ ಉಪನಿಷತ್ತುಗಳ ಅಧ್ಯಯನ ,ಅದರೊಂದಿಗೆ ಸಮಾಜದ ಒಳಿತಿಗೆ, ಧರ್ಮದ ಒಳಿತಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸಾಹಿತ್ಯಗಳ ಮೂಲಕ, ಚಿಂತನೆಗಳ ಮೂಲಕ ಅವರು ರಾಷ್ಟ್ರ ಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಸಹ ಮಾಡಿರುತ್ತಾರೆ ಎಂದರು.
ವೇ.ವಿಘ್ನೇಶ್ವರ ಭಟ್ಟ ಬೀಸಗೋಡ ಮಾತನಾಡಿ, ವಾಣಿಯ ಮುಖಾಂತರ ಭಗವಂತನ ಸಾರಗಳನ್ನು ಜಗತ್ತಿಗೆ ಬಿತ್ತರಿಸಿದವರು ನಾರಾಯಣಾಚಾರ್ಯರಾದರೆ, ವೀಣೆಯ ಮೂಲಕ, ಹರಿಕಥೆಗಳ ಮೂಲಕ ಜನತೆಗೆ ಭಕ್ತಿಮಾರ್ಗವನ್ನು ಸಾರಿದ್ದು ನೀವಣಿ ಗಣೇಶ ಭಟ್ಟರು. ಅಂತಹ ಎರಡು ಚೇತನಗಳು ಇಂದು ನಮ್ಮನ್ನಗಲಿವೆ. ಈ ಮೂಲಕ ಅಪಾರವಾದಂತಹ ನಷ್ಟ ನಮಗಾಗಿದೆ ಎಂದರು.
ಇಡಗುಂದಿಯ ಸ್ನೇಹಸಾಗರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಲ್. ಭಟ್, ಡಿ.ಶಂಕರ ಭಟ್ಟ, ವೇ.ಮಂಜುನಾಥ ಭಟ್ಟ ಭಟ್ರಕೇರಿ, ಮಹಾಬಲೇಶ್ವರ ಭಟ್ಟ ಶೀಗೆಪಾಲ್ ನುಡಿನಮನ ಸಲ್ಲಿಸಿದರು. ವೇ.ಲಕ್ಷ್ಮೀನಾರಾಯಣ ಗುಮ್ಮಾನಿ ಸ್ವಾಗತಿಸಿದರು. ಗಣಪತಿ ಭಟ್ಟ ನಿರ್ವಹಿಸಿದರು.

ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೇ.ನಾರಾಯಣ ಭಟ್ಟ ಮೊಟ್ಟೇಪಾಲ್, ವಿ.ಗಣಪತಿ ಭಟ್ಟ ಮೊಟ್ಟೆಗದ್ದೆ, ವೇ.ರಾಮಕೃಷ್ಣ ಭಟ್ಟ ಕೆಳಗಿನಪಾಲ್, ಮಹಾಬಲೇಶ್ವರ ಹೆಗಡೆ ನೆರ್ಲೆಮನೆ, ನಾಟಿ ವೈದ್ಯರಾದ ನಾರಾಯಣ ಭಟ್ಟ ಕೊಣೇಮನೆ, ವಿಶ್ವೇಶ್ವರ ಭಟ್ಟ ಗೇರಕೊಂಬೆ, ಆಶುಕವಿ ಸುಬ್ರಾಯ ಭಟ್ಟ ಗುಂಡ್ಕಲ್ ಅವರನ್ನು ಸನ್ಮಾನಿಸಲಾಯಿತು.
Leave a Comment