ಯಲ್ಲಾಪುರ : ತಾಲೂಕಿನಲ್ಲಿ ವರ್ಷವಿಡೀ ಸುರಿದ ಭಾರಿ ಮಳೆಗೆ ಎಲ್ಲ ಭಾಗದ ರಸ್ತೆಗಳು ಹಾನಿಗೊಳಗಾಗಿದ್ದು, ಪ್ರಮುಖವಾಗಿ ಕರಾವಳಿಯನ್ನು ಉತ್ತರ ಕರ್ನಾಟಕ ಭಾಗದೊಂದಿಗೆ ಬೆಸೆಯುವ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಆರತಿಬೈಲ್ ಘಟ್ಟದಿಂದ ಅರಬೈಲ್ ಘಟ್ಟದ ವರೆಗೆ ರಸ್ತೆಯು ಈ ಬಾರಿಯ ಮಳೆಗಾಲದಲ್ಲಾದ ಭೂಕುಸಿತದಿಂದಾಗಿ ಸಂಪೂರ್ಣ ಹಾಳಾಗಿದ್ದು, ಈವರೆಗೂ ದುರಸ್ಥಿ ಕಾರ್ಯಕ್ಕೆ ಆಗದಿರುವುದು ಸಾರ್ವಜನಿಕರ ಹಾಗೂ ಪ್ರಯಾಣಿಕರ ಆಕ್ರೋಶ ಕ್ಕೆ ಗುರಿಯಾಗಿದೆ.
ಜುಲೈ- ಅಗಸ್ಟ್ ತಿಂಗಳಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಅರಬೈಲ್ ಘಟ್ಟದ ಭಾಗದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದವು. ಕೆಲ ಪ್ರದೇಶಗಳಲ್ಲಿ ರಸ್ಥೆಗಳೇ ಇಲ್ಲದಾದಂತ ದೃಷ್ಯಗಳು ಉಂಟಾಗಿದ್ದವು. ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಗುಡ್ಡ ಕೊರೆದು, ಕಲ್ಲಿನ ಕಡಿಯಿಂದ ರಸ್ತೆ ನಿರ್ಮಿಸಿಲಾಗಿತ್ತು. ಮಳೆಗಾಲದಲ್ಲಿ ಕೆಸರಿನಲ್ಲಿ ಸಂಚರಿಸಿದರೆ, ಈಗ ಧೂಳಿನಲ್ಲಿ ಅಭಿಷೇಕದ ಗೋಳು. ತಿರುವಿನಲ್ಲಿ ಉಂಟಾಗುವ ದಟ್ಟವಾದ ಧೂಳು ಇನ್ನಷ್ಟು ಅವಘಡಗಳಿಗೆ ಕಾರಣವಾಗುತ್ತಿವೆ. ಘಟನೆ ನಡೆದು ತಿಂಗಳುಗಳೇ ಕಳೆದರು ಸರ್ಕಾರವಾಗಲೀ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲೀ ಶಾಶ್ವತ ಪರಿಹಾರದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ವಾಣಿಜ್ಯ ಉದ್ದೇಶದಿಂದ ಅತೀ ಪ್ರಾಮುಖ್ಯತೆಯನ್ನು ಹೊಂದಿರುವ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಯಲ್ಲಾಪುರದಿಂದ ಅಂಕೋಲಾ ವರೆಗೆ ಹಲವೆಡೆ ರಸ್ತೆಗಳು ಕಿತ್ತುಹೋಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಸ್ತೆಗಳು ಸರಿಯಾಗಿದ್ದಾಗಲೇ ಅರಬೈಲ್ ಘಟ್ಟದ ತಿರುವುಗಳಲ್ಲಿ ಅಪಘಾತಗಳು ಸಾಮಾನ್ಯವಾಗಿ ನಡೆಯುತ್ತಿತ್ತು. ಈಗಿನ ರಸ್ತೆ ಪರಿಸ್ಥಿತಿಯಿಂದ ಅಪಘಾತಗಳ ಪ್ರಮಾಣ ದ್ವಿಗುಣವಾಗಿದೆ. ವಾಣಿಜ್ಯ ಸರಕುಗಳನ್ನು ಹೊತ್ತು ಸಾಗುವ ಭಾರಿ ವಾಹನಗಳು ಹಾಳಾದ ರಸ್ತೆಯಲ್ಲಿ ವಾಹನ ನಿಯಂತ್ರಿಸಲಾಗದೇ, ಪಲ್ಟಿಯಾಗಿ ಆದ ಅವಗಡಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. ಅಪಘಾತಕ್ಕೀಡಾಗುವ ವಾಹನವು ಒಂದಾದರೆ, ಅದರಿಂದ ತೊಂದರೆ ಅನುಭವಿಸುವವರು ಅಧಿಕ. ಇತ್ತೀಚೆಗಷ್ಟೆ ಲಾರಿಯೋಂದು ನಿಯಂತ್ರಣ ತಪ್ಪಿ ತಿರುವಿನಲ್ಲಿ ಪಲ್ಟಿ ಹೊಡೆದ ಪರಿಣಾಮ ದಿನವಿಡೀ ವಾಹನ ಸಂಚಾರ ವ್ಯತ್ತಯವಾಗಿ ಪ್ರಯಾಣಿಕರು 3-4 ಗಂಟೆಗಳ ಕಾಲ ವಾಹನದಲ್ಲಿಯೇ ಸಮಯ ಕಳೆಯುವಂತಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳತ್ತ ಆಕರ್ಷಿತರಾಗಿ ಲಾಕ್ಡೌನ್ನ ನಂತರ ಅಧಿಕ ಪ್ರಮಾಣದಲ್ಲಿ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸುತ್ತಿದ್ದು, ರಸ್ತೆ ಪರಿಸ್ಥಿತಿಯನ್ನು ಕಂಡು ಆಡಳಿತಾಧಿಕಾರಿಗಳನ್ನು ಬೈಯುತ್ತ ಸಾಗುವಂತಾಗಿದೆ. ವರ್ಷಕ್ಕೊಮ್ಮೆ ಆಗಮಿಸುವ ಪ್ರವಾಸಿಗರ ಪರಿಸ್ಥಿತಿಯೇ ಈ ರೀತಿಯಾದರೆ, ಪ್ರತಿನಿತ್ಯ ಅದೇ ರಸ್ತೆಯಲ್ಲಿ ಪ್ರಯಾಣಿಸುವ ಘಟ್ಟದ ಕೆಳಗಿನ ಊರಿನ ಜನ, ಬಸ್ ಹಾಗೂ ವಾಣಿಜ್ಯ ವಾಹನಗಳ ಚಾಲಕರ ಗೋಳು ಹೇಳತೀರದು. ಹಾಳಾದ ರಸ್ತೆಯಲ್ಲಿ ಚಲಾಯಿಸುವುದರಿಂದ ವಾಹನಗಳ ಮೇಲೂ ಒತ್ತಡ ಬಿದ್ದು, ಅವುಗಳ ಬಾಳಿಕೆಯ ಸಮಯ ಕುಂಟಿತವಾಗುತ್ತದೆ ಎಂಬುದು ಮಾಲಿಕರ ಭಯವಾಗಿದೆ. ಅಷ್ಟೇ ಅಲ್ಲದೇ ಪ್ರತಿ ನಿತ್ಯ ನೂರಾರು ಸರ್ಕಾರಿ ಬಸ್ಗಳೂ ಸಹ ಇದೇ ರಸ್ತೆಯಲ್ಲಿ ಚಲಿಸಬೇಕಿದ್ದು, ಅವುಗಳ ರಿಪೇರಿಗೆ ಮತ್ತಷ್ಟು ಹಣ ವ್ಯರ್ಥವಾಗುತ್ತಿದೆ.
ಸ್ವತಃ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಅವರ ಗ್ರಾಮವಾಗಿರುವ ಅರಬೈಲ್ನ ರಸ್ತೆಯ ಸ್ಥಿತಿಯೇ ಹೀಗಾದರೆ, ಉಳಿದ ಪ್ರದೇಶಗಳಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಹಲವರ ಮಾತು. ರಾಷ್ಟ್ರೀಯ ಹೆದ್ದಾರಿ 63 ಕೇವಲ ಎರಡು ಊರುಗಳನ್ನು ಜೋಡಿಸುವ ರಸ್ತೆಯಾಗಿರದೆ, ವಾಣಿಜ್ಯ ವ್ಯವಹಾರ ಹಾಗೂ ಸೇನಾ ಭದ್ರತೆ ದ್ರಷ್ಠಿಯಿಂದಲೂ ಪ್ರಮುಖ ಪಾತ್ರ ವಹಿಸುವುದರಿಂದ ಆದಷ್ಟು ಬೇಗ ರಸ್ತೆ ದುರಸ್ಥಿಗೊಳಿಸಿ, ಪ್ರಯಾಣವನ್ನು ಸುಗಮಗೊಳಿಸಿ, ಪ್ರವಾಸೋದ್ಯಮಕ್ಕೂ ದಾರಿ ಮಾಡಿಕೊಡಬೇಕಾಗಿದೆ.
ಪೊಲೀಸ್ ಅಂಕಿ ಅಂಶಗಳ ಪ್ರಕಾರ 2021ರಲ್ಲಿಆರ್ತಿ ಬೈಲ್,ಅರಬೈಲ್ ಘಟ್ಟ ಒಂದರಲ್ಲೇ ಆಗಿರುವ 42ಅಪಘಾತಗಳಲ್ಲಿ 6 ಜನ ಪ್ರಾಣ ಬಿಟ್ಟಿದ್ದು, 31 ಜನ ಗಾಯಗೊಂಡಿದ್ದಾರೆ. ಇನ್ನು ದಾಖಲೆಯಾಗದ ಸಣ್ಣ ಪುಟ್ಟ ಅಪಘಾತಗಳಿಗೆ ಲೆಕ್ಕವಿಲ್ಲ.
ನಾವು ಪ್ರತಿ 3-4 ದಿನಕ್ಕೊಮ್ಮೆ ಇದೇ ರಸ್ತೆಯಲ್ಲಿ ಟ್ಯಾಂಕರ್ ಚಲಾಯಿಸಿಕೊಂಡು ಬರಬೇಕು. ಘಟ್ಟದ ತಿರುವುಗಳಲ್ಲಿ ರಸ್ತೆಯು ಸಂಪೂರ್ಣ ಹಾಳಾಗಿದೆ. ಇದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವಂತಾಗಿದೆ. ಅಷ್ಟೇ ಅಲ್ಲದೆ ಟ್ಯಾಂಕರ್ ವಾಹನಗಳು ಸಹ ಬೇಗನೆ ರಿಪೇರಿಗೆ ಬರುತ್ತದೆ. ನಮಗೆ ಇದೇ ರಸ್ತೆ ಅನಿವಾರ್ಯವಾಗಿದೆ. ಆದಷ್ಟು ಬೇಗ ದುರಸ್ಥಿಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.–ಸುರೇಶ, ಟ್ಯಾಂಕರ್ ಚಾಲಕ
Leave a Comment