
ಯಲ್ಲಾಪುರ. :ತಾಲೂಕಿನ ಕರಡೊಳ್ಳಿಯ ಮಹಿಳೆಯೊಬ್ಬರನ್ನು ಹೆರಿಗೆಗೆಂದು ತಾಲೂಕಾ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ನಲ್ಲಿ ಕರೆ ತರುತ್ತಿರುವಾಗ ಹೆರಿಗೆ ನೋವು ಹೆಚ್ಚಾಗಿ ಅಂಬ್ಯುಲೆನ್ಸ್ ನಲ್ಲಿ ಮಹಿಳೆಯು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ತಾಲೂಕಿನ ಕರಡೊಳ್ಳಿಯ 30 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಹೆರಿಗೆಗೆಂದು ಅಂಬ್ಯುಲೆನ್ಸ್ ನಲ್ಲಿ ತರುತ್ತಿರುವಾಗ ಒಂದು ಹೆಣ್ಣು, ಒಂದು ಗಂಡು ಅವಳಿ ಮಕ್ಕಳ ಜನನವಾಗಿದೆ. 10 ನಿಮಿಷಗಳ ಅಂತರದಲ್ಲಿ ಜನಿಸಿದ ಈ ಅವಳಿ ಶಿಶುಗಳ ತೂಕ ಕಡಿಮೆ ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆಂದು ತಾಯಿ,ಮಕ್ಕಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಮಹಿಳೆಗೆ ಇದು ಮೂರನೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿನ ತೂಕ 750 ಗ್ರಾಂ ಹಾಗೂ ಗಂಡು ಮಗುವಿನ ತೂಕ 1ಕಿಲೋ 250 ಗ್ರಾಂ ಇತ್ತು. 108 ವಾಹನದ ತುರ್ತು ವೈದ್ಯಕೀಯ ತಂತ್ರಜ್ಞ ಶಿವಕುಮಾರ್ ಇಟಗಿ, ಚಾಲಕ ಅನೀಲ್ ನಾಯ್ಕ ಅವರು ಮಹಿಳೆಯ ತಾಯಿಯ ಸಹಕಾರದಿಂದ ಹೆರಿಗೆ ಮಾಡಿಸಿದ್ದಾರೆ.
ಯಲ್ಲಾಪುರದಲ್ಲಿ ಈ ವಾರ ಅಂಬ್ಯೂಲೆನ್ಸ್ ವಾಹನದಲ್ಲಿ ಹೆರಿಗೆಯಾದ ಎರಡನೇ ಘಟನೆ ಇದಾಗಿದ್ದು, ತುರ್ತಾಗಿ ಸ್ಪಂದಿಸಿದ ಅಂಬುಲೆನ್ಸ್ ಸಿಬ್ಬಂದಿಗಳ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Leave a Comment