ಯಲ್ಲಾಪುರ :ಕೋವಿಡ್ ಮೂರನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಬೇಡ. ಆದರೆ ಆ ಬಗ್ಗೆ ಅತಿ ಆತಂಕವೂ ಬೇಡ. ಅತಿ ಆತಂಕದಿಂದಾಗಿಯೇ ಹಲವರು ಸಾವನ್ನಪ್ಪಿದ್ದಾರೆ.
ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಪದ್ಧತಿ ಹಾಗೂ ಒಳ್ಳೆಯ ನಿದ್ದೆ ಅಗತ್ಯ. ಇವು ದೇಹವನ್ನು ಸಧೃಡವಾಗಿಸುತ್ತದೆ. ಎಂದು ಖ್ಯಾತ ವೈದ್ಯ ಹಾಗೂ ಕೋವಿಡ್ ನಿಗ್ರಹ ಕಾರ್ಯದಿಂದ ರಾಷ್ಟ್ರದ ಗಮನ ಸೆಳೆದ ಡಾ ಅನಿಲ್ ಕುಮಾರ್ ಅವುಲಪ್ಪ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಕೋವಿಡ್ ಸಂದರ್ಭದಲ್ಲಿ ಹಮ್ಮಿಕೊಂಡಿರುವ ವೈದ್ಯ ತಜ್ಞರ ಜೊತೆಗಿನ ಸಂವಾದ ಮಾಲೆಯಲ್ಲಿ ಕೋವಿಡ್ ಮೂರನೇ ಅಲೆಯ ಆತಂಕದ ಬಗ್ಗೆ ಅವರು ಶನಿವಾರ ಮಾತನಾಡಿದರು.
ದೇಸಿ ಆಹಾರ ಪದ್ಧತಿ ಕೂಡಾ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತಿ ಮುಖ್ಯ
ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದು. ಆಗ ಕೋವಿಡ್ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಇದಕ್ಕೆ ಸಹಕಾರ ಅಗತ್ಯ. ನಮ್ಮ ಆರೋಗ್ಯದ ವಿಚಾರದಲ್ಲಿ ನಾವೇ ಮೊದಲ ವೈದ್ಯರು ಎಂದರು.
ಮಾಧ್ಯಮದವರದ್ದು ಧಾವಂತದ ಬದುಕು. ಆದರೆ ಕೋವಿಡ್ ಅನ್ನು ನಿರ್ಲಕ್ಷ್ಯ ಮಾಡಿಕೊಂಡು ಓಡಾಡಬಾರದು. ಅಷ್ಟೇ ಅಲ್ಲದೆ ತಾವೇ ಔಷಧಿ ಮಾಡಿಕೊಳ್ಳುವ ಕ್ರಮವನ್ನೂ ಕೈಬಿಡಬೇಕು ಎಂದು ಮಾಧ್ಯಮದವರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಆನ್ಲೈನ್ ಮೂಲಕ ಸಂವಾದ ನಡೆಸಿಕೊಟ್ಟರು.
ಈ ಸಂವಾದದಲ್ಲಿ ಯಲ್ಲಾಪುರ ಕಾನಿಪ ಸಂಘದ ಖಜಾಂಚಿ ಪ್ರಭಾ ಜಯರಾಜ್ ಭಾಗವಹಿಸಿದ್ದರು.
ಐ ಎಫ್ ಡಬ್ಲ್ಯು ಜೆ ಅಧ್ಯಕ್ಷ ಬಿ ವಿ ಮಲ್ಲಿಕಾರ್ಜುನಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮತ್ತೀಕೆರೆ ಜಯರಾಂ, ಪುಂಡಲೀಕ ಭೀ ಬಾಳೋಜಿ, ಜಿ ಸಿ ಲೋಕೇಶ್, ಸಂಜೀವ ರಾವ್ ಕುಲಕರ್ಣಿ, ಮಲ್ಲಿಕಾರ್ಜುನ್, ಸೋಮಶೇಖರ ಗಾಂಧಿ, ಮಂಡಿಬೆಲೆ ರಾಜಣ್ಣ, ಚಿತ್ರದುರ್ಗದ ದಿನೇಶ್ ಗೌಡಗೆರೆ, ಉತ್ತರ ಕನ್ನಡ ಯಲ್ಲಾಪುರದ ಪ್ರಭಾ ಜಯರಾಜ್, ಕೊಪ್ಪಳದ ಸಿರಾಜ್ ಬಿಸರಳ್ಳಿ, ರಾಜ್ಯ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಆಕಾಶವಾಣಿಯ ನಿರ್ದೇಶಕಿ ನಿರ್ಮಲಾ ಯಲಿಗಾರ, ಪರಿಸರಪ್ರೇಮಿ ಬಳ್ಳೂರು ಉಮೇಶ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.
Leave a Comment