
ಯಲ್ಲಾಪುರ: ಗುಜರಾತಿನ ಗಾಂಧಿನಗರದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ನರಸಿಂಹ ಕೋಮಾರ ಅವರಿಗೆ ಈ ಬಾರಿಯ ರಾಷ್ಟ್ರಪತಿ ವಿಶೇಷ ಸೇವಾಪದಕ ಘೋಷಣೆಯಾಗಿದೆ. ಕೋಮಾರ ಅವರು ತಾಲೂಕಿನ ಬೀಗಾರಿನವರಾಗಿದ್ದು, ಕಳೆದ 25 ವರ್ಷಗಳಿಂದ ಗುಜರಾತಿನ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೀಗಾರಿನ ಕೋಮಾರಮನೆಯವರಾದ ಇವರು, 1996 ರ ಬ್ಯಾಚಿನ ಐಪಿಎಸ್ ಅಧಿಕಾರಿ. ಗುಜರಾತಿನ ದಂಗ್ಸ್, ವಲ್ಸಾದ್, ಗೋದ್ರಾ, ಆನಂದ, ರಾಜಕೋಟ್ ಸಿಟಿ ಮುಂತಾದೆಡೆ ಪೊಲೀಸ್ ಸುಪರಿಡೆಂಟ್ ಆಗಿ, ಸಿಐಡಿ ವಿಭಾಗದಲ್ಲಿ ಗಾಂಧಿನಗರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಾಗಪುರ ಹಾಗೂ ಬೆಂಗಳೂರಿನಲ್ಲಿ ಸಿಬಿಐ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸೂರತ್ ನಲ್ಲಿ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿ, ಐಜಿ ಆಫ್ ಪೊಲೀಸ್ ಆಗಿ ಗಾಂಧಿನಗರ, ಸೂರತ್ ನಲ್ಲಿ ಕಾನೂನು ಪಾಲನೆ, ತಾಂತ್ರಿಕ ಸೇವೆ, ಯೋಜನೆ ಮತ್ತು ಆಧುನೀಕರಣ ಮುಂತಾದ ವಿಭಾಗಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.
ವಿಶ್ವಾಸ್ ಯೋಜನೆ ಕಾರ್ಯಪಡೆಯ ಅಧ್ಯಕ್ಷರಾಗಿ ಗುಜರಾತ್ ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ, 34 ಜಿಲ್ಲೆಗಳ ವಿವಿಧೆಡೆ ಸುರಕ್ಷತಾ ದೃಷ್ಟಿಯಿಂದ 7000 ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ಅಳವಡಿಸಲು ಕಾರಣರಾಗಿದ್ದಾರೆ. ಖಾಸಗಿ ರಕ್ಷಣಾ ಎಜೆನ್ಸಿ ನಿಯಂತ್ರಣ, ಕೋವಿಡ್ ನಿಯಂತ್ರಣದ ರಾಜ್ಯ ನೋಡೆಲ್ ಅಧಿಕಾರಿಯಾಗಿದ್ದಾರೆ. ಹೀಗೆ ಗುಜರಾತ್ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಗಾಂಧಿ ನಗರದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೋಮಾರ ಅವರಿಗೆ 2012 ರಲ್ಲಿ ರಾಷ್ಟ್ರಪತಿ ಪದಕ, 2015 ರಲ್ಲಿ ರಾಷ್ಟ್ರೀಯ ಇ-ಆಡಳಿತ ವಿಭಾಗದಲ್ಲಿ ಬಂಗಾರದ ಪದಕ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ವಿಶೇಷ ಸೇವಾಪದಕ ಘೋಷಣೆಯಾಗಿದೆ. ಇವರು ಪೊಲೀಸ್ ಇಲಾಖೆಯಲ್ಲಿ ರಾಜ್ಯಮಟ್ಟದ ಉನ್ನತ ಹುದ್ದೆಗೆ ಏರಿರುವ ಯಲ್ಲಾಪುರದ ಮೊದಲಿಗರಾಗಿದ್ದಾರೆ
Leave a Comment