
ಯಲ್ಲಾಪುರ : ಪ್ರತಿ ವ್ಯಕ್ತಿಗೆ ದೇಶದಲ್ಲಿ ಕೇವಲ ಒಂದು ಮತವಿದೆ. ಆಮಿಷಕ್ಕೊಳಗಾಗದೇ, ನಿಮ್ಮ ಮತಗಳ ಮಹತ್ವವನ್ನು ಅರಿಯುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿಗಳ ಆಶ್ವಾಸನೆಗಳನ್ನು ನಂಬಿ ಜನತೆ ಬಿಜೆಪಿಯತ್ತ ಒಲವು ತೋರಿಸಿದ್ದರು. ಆದರೆ ಈಗ ಆ ಸಮಯ ಬದಲಾಗುತ್ತಿದೆ. ಪ್ರತಿ ವರ್ಷ ೨ ಕೋಟಿ ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಇಂದು ಅವರೆಲ್ಲ ಮನೆಯಲ್ಲಿ ಖಾಲಿ ಕೂರುವಂತಾಗಿದೆ. ದೇಶದಲ್ಲಿ ಬಡತನ ಹೆಚ್ಚುತ್ತಿದೆ. ಕಾಂಗ್ರೆಸ್ ಯುಗದಲ್ಲಿ ದೇಶದಲ್ಲಿ ಅನೇಕ ಉದ್ಯೋಗಾವಕಾಶಗಳು ಹುಟ್ಟಿದ್ದವು. ಹೊಸ ಹೊಸ ಕೈಗಾರಿಕೆಗಳ ಜನನವಾಗಿತ್ತು. ಇಂದು ಅವೆಲ್ಲವನ್ನು ಮಾರುವತ್ತ ಬಿಜೆಪಿ ಸಾಗುತ್ತಿದೆ.

ರಾಜ್ಯದಲ್ಲಿ ಇಂದು ಕಮಿಷನ್ ಸರ್ಕಾರ ಚಾಲ್ತಿಯಲ್ಲಿದೆ ಎಂಬುದನ್ನು ಇಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ. ನಾವು ಮತ್ತೆ ಅದನ್ನು ಹೇಳುವ ಅವಶ್ಯಕತೆಯೇ ಇಲ್ಲ. ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಬೇಕು. ಇದು ರಾಜ್ಯ ಹಾಗೂ ದೇಶದ ಹಿತ ಕಾಪಾಡಲು ಅತ್ಯವಶ್ಯವಾಗಿದೆ. ಈ ಸದಸ್ಯತ್ವ ಆಂದೋಲನ ಯಶಸ್ವಿಯಾಗಲು ಎಲ್ಲರೂ ಸಹ ಸಹಕರಿಸಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಕ್ಷೇತ್ರದಲ್ಲಿ ರೈತರ ಅಭಿವೃದ್ಧಿಗೆಂದು ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ನೀರಿನ ವ್ಯವಸ್ಥೆ ಮಾಡಿಸಲಾಗಿತ್ತು. ಆದರೆ ಇಂದು ಅವೆಲ್ಲವು ತಾವು ಮಾಡಿಸಿದ್ದು ಎಂದು ಹೇಳಿಕೊಂಡು ತಿರುಗುವ ಕೆಲಸವನ್ನು ಮಾತ್ರ ಶಾಸಕರು ಮಾಡುತ್ತಿದ್ದಾರೆ. ಇಲ್ಲಿನ ಅವರ ವೈಫಲ್ಯತೆಯನ್ನು ಕಂಡು ಮುಖ್ಯಮಂತ್ರಿಗಳು ಅವರನ್ನು ಬೇರೆ ಜಿಲ್ಲೆಯ ಉಸ್ತುವಾರಿಯಾಗಿ ನೇಮಿಸಿದ್ದಾರೆ. ಕಾಲಚಕ್ರ ಸದಾ ತಿರುಗುತ್ತವೆ. ಮತ್ತೆ ನಮ್ಮ ಜಿಲ್ಲೆಗೆ, ರಾಜ್ಯಕ್ಕೆ ಅಭಿವೃದ್ಧಿಯ ಕಾಲ ಬಂದೇ ಬರುತ್ತೆ. ಅದಕ್ಕೆಲ್ಲ ನಿಮ್ಮ ಈ ಸದಸ್ಯತ್ವ ನೋಂದಣಿ ಅಡಿಗಲ್ಲಾಗಲಿ ಎಂದರು.
ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಪ್ರಶಾಂತ ದೇಶಪಾಂಡೆ ಮಾತನಾಡಿ, ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಿದೆ ಎನ್ನುತ್ತಿದ್ದವರಿಗೆ ಇಂದಿನ ಈ ಸಭೆಯ ಅಡ್ರೆಸ್ ಕೊಡಿ. ಕಾಂಗ್ರೆಸ್ ಅಸ್ಥಿತ್ವ ಅವರಿಗೆ ಅರ್ಥವಾಗುತ್ತವೆ. ಇಂದು ಈ ಕ್ಷೇತ್ರದಲ್ಲಿರುವ ಎಲ್ಲ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಹಾಕಿರುವ ಅಡಿಗಲ್ಲುಗಳಲ್ಲಿ ಕಾಂಗ್ರೆಸ್ ಪಕ್ಷದ ಹೆಸರಿದೆ. ಇಂದು ಕೇವಲ ಭ್ರಷ್ಟಾಚಾರದ ಅಡಗಲ್ಲನ್ನು ಬಿಜೆಪಿ ಹಾಕಿದೆ. ಇವೆಲ್ಲವನ್ನು ಹೋಗಲಾಡಿಸಲು ಈ ಸದಸ್ಯತ್ವ ಅಭಿಯಾನ ಮುಖ್ಯವಾಗಿದೆ ಎಂದರು.ಇದೆ ಸಂಧರ್ಭ ದಲ್ಲಿ ಚಂದಗುಳಿ ಯ ಕೆಲವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಕೆಪಿಸಿಸಿ ವಿಕ್ಷಕರಾದ ಸುಷ್ಮಾ ರಾಜಗೋಪಾಲ್ ರೆಡ್ಡಿ , ವಿ ಎಸ್ ಆರಾಧ್ಯ, ಶ್ರೀನಿವಾಸ ಹಳ್ಳಲ್ಲಿ, ಜಿಲ್ಲಾ ಜಾಲತಾಣದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಮುಂತಾದವರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಸ್ ಭಟ್ ಸ್ವಾಗತಿಸಿದರು.ಡಿ ಸಿಸಿ ಸದಸ್ಯ ಉಲ್ಲಾಸ್ ಶಾನಭಾಗ ನಿರ್ವಹಿಸಿದರು. ಕಾರ್ಯದರ್ಶಿ ಅನಿಲ ಮರಾಠಿ ವಂದಿಸಿದರು.
Leave a Comment