
ಯಲ್ಲಾಪುರ:ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಗಾಳಿಗೆ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ತೋಟದ ಕಲ್ಲಳ್ಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಗಾಳಿಯ ರಭಸಕ್ಕೆ ಗ್ರಾಮದ ಮಂಜುನಾಥ ಗೋಪಾಲ ಭಟ್ಟ, ಸದಾನಂದ ತಿಮ್ಮಪ್ಪ ಹೆಗಡೆ, ಶ್ರೀಧರ ವೆಂ. ಭಟ್ಟ, ಕೆ.ವಿ.ಅನುರಾಧ, ನರಸಿಂಹ ವೆಂಕಟರಮಣ ಹೆಗಡೆ, ಶ್ರೀಕಾಂತ ಗಣಪತಿ ಭಟ್ಟ ಮೊದಲಾದವರ ಮನೆ,ಕೊಟ್ಟಿಗೆ,ಗಾಡಿ ಶೆಡ್ ನ ಮೇಲ್ಛಾವಣಿಯ ಹೆಂಚು, ತಗಡುಗಳು ಹಾರಿ ಹೋಗಿವೆ.
ಊರಿನ ಒಟ್ಟು ಇಪ್ಪತೈದು ಎಕರೆ ಅಡಕೆ ತೋಟದಲ್ಲಿ ಐನೂರಕ್ಕೂ ಹೆಚ್ಚು ಅಡಕೆ ಮರಗಳು ನೆಲಕ್ಕುರುಳಿವೆ. ಉದಯ ಗೋಪಾಲ ಭಟ್ಟ ಅವರ ತೆಂಗಿನ ತೋಟದಲ್ಲಿ ಹದಿಮೂರಕ್ಕಿಂತ ಹೆಚ್ಚು ತೆಂಗಿನ ಮರಗಳು ಮುರಿದು ಬಿದ್ದಿವೆ. ಗ್ರಾಮದಲ್ಲಿ ಬೇರೆ ಬೇರೆ ರೈತರ ತೋಟವೂ ಸೇರಿ 30 ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕುರುಳಿವೆ.ಬಾಳೆಗದ್ದೆಯ ಸುಕ್ರು ಗೌರಯ್ಯ ಪಟಗಾರ ಎಂಬವರಿಗೆ ಸೇರಿದ ಶೌಚಗೃಹ ಹಾನಿಗೀಡಾಗಿದೆ. ಬಾಳೆಗದ್ದೆಯ ಭಾರತಿ ನಾರಾಯಣ ಪಟಗಾರ ಅವತ ಮನೆಯ ಮೇಲೆ ಮರದ ಟೊಂಗೆ ಬಿದ್ದು ಮನೆಗೆ ಹಾನಿಯಾಗಿದೆ.
ಗ್ರಾ.ಪಂ ಸದಸ್ಯ ಗ.ರಾ.ಭಟ್ಟ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಹಾನಿ ಪರಿಶೀಲಿಸಿದರು.
Leave a Comment