ಯಲ್ಲಾಪುರ: ತಾಲೂಕಿನ ಸಣ್ಣಯಲವಳ್ಳಿಯ ಮಹಿಳೆಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ 108 ಆ್ಯಂಬುಲೆನ್ಸ್ ವಾಹನದಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ.
ಸಣ್ಣಯಲವಳ್ಳಿಯ ಗೀತಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಶಾ ಕಾರ್ಯಕರ್ತೆ ಸೀಮಾ ನಾಯ್ಕ ಅವರ ಮೂಲಕ 108ಕ್ಕೆ ಕರೆ ಮಾಡಿ ಕರೆಸಿದ್ದಾರೆ. ಗರ್ಭಿಣಿ ಗೀತಾ ಅವರನ್ನು 108 ವಾಹನದ ಮೂಲಕ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತದೊತ್ತಡ ಹೆಚ್ಚಿದ್ದ ಕಾರಣ ಹೆರಿಗೆ ಮಾಡಿಸುವದು ಕಷ್ಟ ಎಂದು ವೈದ್ಯರು ಹೇಳಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗಬೇಕೆಂದು ತಿಳಿಸಿದ್ದಾರೆ.
ನಂತರ ಹುಬ್ಬಳ್ಳಿಗೆ ಕರೆದೊಯ್ಯುವ ಮಾರ್ಗಮಧ್ಯೆ ಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 108 ವಾಹನದ ಸಿಬ್ಬಂದಿ ತಂತ್ರಜ್ಞ ಶಿವಕುಮಾರ್ ಇಟಗಿ, ಚಾಲಕ ಶ್ರೀಶೈಲ ಮಾದರ್ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆಯ ನಂತರ ಪ್ರಥಮ ಚಿಕಿತ್ಸೆ ನೀಡಿ, ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Leave a Comment