ಯಲ್ಲಾಪುರ: ಪ್ರತಿಭೆ ಎಲ್ಲರಲ್ಲೂ ಇರುತ್ತದೆ ಆದರೆ ಅದಕ್ಕೆ ಅವಕಾಶಗಳು ಇರುವದಿಲ್ಲ. ಇಂದು ಹಣಬಲ ತೋಳ್ಬಲ ಇದ್ದವರು ಮಾತ್ರ ಎಲ್ಲ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದ್ದು ಸಾಧಕರೆನಿಸಿಕೊಳ್ಳುತ್ತಿರುವದು ನಮ್ಮ ಸಮಾಜದಲ್ಲಿ ಕಂಡುಬರುವ ದೊಡ್ಡ ದೌರ್ಬಲ್ಯ ವಾಗಿದೆ ಎಂದರೆ ತಪ್ಪಾಗಲಾರದು.ಎಂದು ರಾಜ್ಯ ವಿಕೇಂದ್ರಿಕರಣ ಹಾಗೂ ಪಂಚಾಯತರಾಜ್ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಅಡಿಕೆ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದಡಿಯಲ್ಲಿ ವಿನೋದಕುಮಾರ ಐಗಳ ಅವರ ಚೊಚ್ಚಲ ಕೃತಿ ಚುಟುಕು ಗುಟುಕು ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಾನಷ್ಟೇ ಬೆಳೆಯಬೇಕು ಎಂಬ ಪ್ರವೃತ್ತಿ ಹೆಚ್ಚಾಗಿ ಕಾಣಬರುತ್ತಿರುವವರ ಮಧ್ಯೆ ಸ್ವತಃ ಸಾಹಿತಿಯಾದ ಶಿವಲೀಲಾ ಹುಣಸಗಿ ಮತ್ತೊಬ್ಬ ಸಾಹಿತಿಯನ್ನು ಸೃಷ್ಟಿಸುತ್ತಿರುವದು ಶ್ಲಾಘನೀಯ. ಕಾರ್ಯವಾಗಿದೆ.ಇದೇ ರೀತಿ ಎಲ್ಲ ಕ್ಷೇತ್ರಗಳಲ್ಲೂ ಬೇರೆಯವರನ್ನು ಬೆಳೆಸುವ ಗುರುತಿಸುವ ಪ್ರವೃತ್ತಿ ಬೆಳೆಯಬೇಕು ಎಂದರು.
ಹಿರಿಯ ಸಾಹಿತಿ ವನರಾಗ ಶರ್ಮಾ ಮಾತನಾಡಿ ಸಾಹಿತ್ಯಕ್ಕೆ ವೇದಿಕೆ ಕಲ್ಪಿಸಿಕೊಟ್ಟರೆ ಪ್ರತಿಭಾ ಪ್ರದರ್ಶನ ಸಾಧ್ಯವಾಗುತ್ತದೆ. ಚುಟುಕು ಗುಟುಕು ಸಂಗ್ರಹದಲ್ಲಿ ಪ್ರಕೃತಿ,ರಾಜಕೀಯ, ಶಿಕ್ಷಣ,ಸಾಮಾಜಿಕ ಕಾಳಜಿ, ಎಲ್ಲ ವಿಷಯವನ್ನೋಳಗೊಂಡಿದ್ದು ಪದವಿನೋದದ ಅನಾವರಣಗೊಂಡಿದೆ ಎಂದರು.
ವೇದಿಕೆ ಜಿಲ್ಲಾಅಧ್ಯಕ್ಷೆ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜವನ್ನು ಬದಲಾಯಿಸುವ ಮೊದಲು ನಮ್ಮ ದೃಷ್ಟಿಕೋನ ಬದಲಾಗಬೇಕು ಎಲ್ಲರೊಳಗೊಂದಾಗಬೇಕು.ಮನತೃಪ್ತಿಗಾಗಿ ಕವನ ಬರೆದರೂ ಓದುವವರ ಮನಮುಟ್ಟುವಂತಿರಬೇಕು.ಹವ್ಯಾಸವನ್ನು ಪ್ರವೃತ್ತಿಯಾಗಿಸಿಕೊಂಡು ನಮ್ಮ ದುಡಿಮೆಯ ಒಂದು ಭಾಗವನ್ನು ಸಾಹಿತ್ಯಿಕ ಚಟುವಟಿಕೆಗಳಿಗೆ ಮೀಸಲಿಡಬೇಕು. ವಿನೋದ ಅವರ ಚುಟುಕು ವಾಸ್ತವದ ಜೊತೆಗೆ ನವಿರಾದ ಹಾಸ್ಯ, ಮೊನಚಾದ ವ್ಯಂಗದೊAದಿಗೆ ಓದುಗರಿಗೆ ಒಂದೇ ಗುಟುಕಿನಲ್ಲಿ ಕುಟುಕುವಂತಿದೆ.
ಯು.ಕೆ ಸೌಹಾರ್ಧ ಸಂಸ್ಥೆಯ ನಿರ್ದೇಶಕ ಡಾ ರವಿಭಟ್ಟ ಬರಗದ್ದೆ ಮಾತನಾಡಿ ಕವನಗಳು,ಚಟುಕುಗಳು ಸಂಘಟಿತ ಸಮಾಜಕ್ಕೆ ನೀಡುವ ಕೊಡುಗೆಗಳಾಗಿವೆ.ಇಂದು ಕವಿಗಳು ಚಲನಶೀಲತೆಯನ್ನು ಕಳೆದುಕೊಳ್ಳದೇ ಬೆಳೆಯುತ್ತಿರುವ ತಂತ್ರಜ್ಞಾನದೊAದಿಗೆ ಹೆಜ್ಜೆಹಾಕುವದು ಅನಿವಾರ್ಯವಾಗಿದೆ ಎಂದರು.
ವೇದಿಕೆಯ ಶಿರಸಿಯ ತಾಲೂಕಾದ್ಯಕ್ಷ ಮುಕ್ತಕ ಕವಿ ಕೃಷ್ಣ ಪದಕಿ ಕೃತಿ ಪರಿಚಯಿಸಿದರು. ಸುನಂದಾ ಪಾಠಣಕರ ಮುನ್ನುಡಿ ಸಂತೋಷ ಶೆಟ್ಟಿ ಬೆನ್ನುಡಿ ವಾಚಿಸಿದರು. ಕೃತಿಕಾರ ವಿನೋದ ಐಗಳ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಂಚಾಲಕಿ ಆಶಾ ಶೆಟ್ಟಿ ನಿರ್ವಹಿಸಿದರು.ಕಾರ್ಯದರ್ಶಿ ಡಾ ನವೀನ ಕುಮಾರ ವಂದಿಸಿದರು.
Leave a Comment