ಯಲ್ಲಾಪುರ : ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದ ಕಳ್ಳತನ ಪ್ರಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮೇ. 12ರ ನಸುಕಿನ ಜಾವ ವ್ಯಕ್ತಿಯೋರ್ವನು ಪಟ್ಟಣದ ಸಂಭ್ರಮ್ ಹೋಟೆಲ್ ಬಳಿಯಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಿಟಕಿಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ಸ್‌ನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಕಿತ್ತು ತೆಗೆದು ಬ್ಯಾಂಕ್ ಒಳಗಡೆ ಒಳಪ್ರವೇಶ ಮಾಡಿ ಬ್ಯಾಂಕ್‌ನ ನೆಲ ಮಹಡಿಯಲ್ಲಿರುವ ಕಬ್ಬಿಣದ ಕಪಾಟನ್ನು ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಆರೋಪಿತನಾದ ಪಟ್ಟಣದ ಕಾಳಮ್ಮನಗರ ನಿವಾಸಿ ಟೈಲ್ಸ್ ಕೆಲಸ ಮಾಡುತ್ತಿದ್ದ ಉಮೇಶ ಗೋವಿಂದಪ್ಪಾ ಹಾನಗಲ್ (40) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್, ಒಂದು ಕಾರ್ ಮತ್ತು ಒಂದು ಮೋಟಾರ ಸೈಕಲ್‌ನ್ನು ಜಪ್ತು ಪಡಿಸಿಕೊಂಡು ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಶಿರಸಿ ಪೊಲೀಸ ಉಪ ಅಧೀಕ್ಷಕರಾದ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಸುರೇಶ ಯಳ್ಳೂರ ನೇತ್ರತ್ವದಲ್ಲಿ, ಪಿ.ಎಸ್.ಐ ಅಮೀನಸಾಬ್ ಎಮ್.ಅತ್ತಾರ, ಪಿ.ಎಸ್.ಐ ಮಂಜುನಾಥ ಗೌಡರ, ಪ್ರೋ. ಪಿ.ಎಸ್.ಐ ಶಿವಕುಮಾರ, ಹಾಗೂ ಸಿಬ್ಬಂದಿಯವರಾದ ಬಸವರಾಜ, ಮಹ್ಮದ ಶಪೀ, ಗಜಾನನ, ಚಿದಾನಂದ,ನಾಗಪ್ಪ ಲಮಾಣಿ,ಶೋಭಾ ನಾಯ್ಕ ಇವರು ಸಹ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
Leave a Comment