
ಯಲ್ಲಾಪುರ : ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಲವು ಮಕ್ಕಳು ಅನಿವಾರ್ಯ ಕಾರಣಗಳಿಂದ ತಮ್ಮ ಬಾಲ್ಯವನ್ನು ಕಳೆದುಕೊಂಡು ಕೆಲಸಕ್ಕೆ ತೊರಳುವಂತಾಗುತ್ತದೆ. ಅದರೊಂದಿಗೆ ತಮ್ಮ ಮೂಲಭೂತ ಹಕ್ಕುಗಳಿಂದಲೂ ಸಹ ವಂಚಿತರಾಗುವಂತಾಗುತ್ತದೆ. ಕೆಲವರು ಮಕ್ಕಳ ಬಡತನದ ದುರುಪಯೋಗ ಪಡಿಸಿಕೊಂಡು ಮಕ್ಕಳನ್ನು ಕಡಿಮೆ ಸಂಬಳಕ್ಕೆ ಕೆಲಸಕ್ಕಿಟ್ಟುಕೊಳ್ಳುತ್ತಾರೆ. ಅಂತವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವ ಎಲ್ಲ ಹಕ್ಕು ನ್ಯಾಯಾಲಯಕ್ಕಿದೆ. ಹೀಗಾಗಿ ಸಮಾಜದ ಪ್ರತಿಯೊಬ್ಬರು ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಪಣತೊಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಎಸ್. ಟಿ. ಗಾಂವ್ಕರ್ ಬಾಲ ಕಾರ್ಮಿಕ ವಿರೋಧಿ ದಿನದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಿರಿಯ ಸಹಾಯಕ ಸರಕಾರಿ ಅಭಿಯೋಜಕರಾದ ಝೀನತ್‌ಬಾನು ಶೇಖ್, ವಕೀಲರಾದ ಬೀಬಿ ಅಮೀನಾ ಶೇಖ್, ಕಾರ್ಮಿಕ ಅಧಿಕಾರಿ ಕೃಷ್ಣಮ್ಮ ಡಿ., ಕಾರ್ಮಿಕ ನಿರೀಕ್ಷಕ ಅಶೋಕ ಎಸ್ ಒಡೆಯರ್, ಮುರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಸಂಜಯ ಎಲ್. ನಾಯಕ, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಶಿಲ್ಪಾ ಪ್ರಭು ಸ್ವಾಗತಿಸಿದರು. ಅರೆಕಾಲಿಕ ಸ್ವಯಂ ಸೇವಕ ಸುಧಾಕರ ನಾಯ್ಕ ನಿರೂಪಿಸಿದರು. ಶಿಕ್ಷಕಿ ಪವಿತ್ರಾ ಎಲ್ಲರನ್ನು ವಂದಿಸಿದರು.
Leave a Comment