ಯಲ್ಲಾಪುರ : ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ತಾಲೂಕ ಪಂಚಾಯತ ಸಾಮಾನ್ಯ ಸಭೆ ತಾ.ಪಂ. ಆಡಳಿತಾಧಿಕಾರಿ ನಟರಾಜ್ ಟಿ.ಎಚ್. ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರು ಹಾಜರಿದ್ದು, ತಮ್ಮ ಇಲಾಖೆಯ ಕಾರ್ಯ ಪ್ರಗತಿಯ ಕುರಿತು ವಿವರ ನೀಡಿದರು. ಆರೋಗ್ಯ ಇಲಾಖೆಯಿಂದ ತಾಲೂಕಿನಲ್ಲಿ ಒಂದು ಡೆಂಗ್ಯೂ ಕೇಸ್ ಪತ್ತೆಯಾಗಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‌ಗಳನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಹಾಗೂ ಕೊರೋನಾ ಸಂಪೂರ್ಣ ಹತೋಟಿಯಲ್ಲಿದ್ದು, 4ನೇ ಅಲೆಯಲ್ಲಿ ಕೇವಲ ೨ ಪ್ರಕರಣಗಳು ಕಂಡು ಬಂದಿದೆ ಎಂದು ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆಯಿಂದ ಪ್ರಸ್ತುತ ವರ್ಷಕ್ಕೆ ಈವರೆಗೆ ಯಾವುದೇ ಅನುದಾನ ಬಂದಿಲ್ಲ. ತೋಟಗಾರಿಕೆಯನ್ನು ಯಂತ್ರೀಕರಣಗೊಳಿಸಲು ಸರ್ಕಾರದ ಯೋಜನೆಯಡಿ ತಾಲೂಕಿಗೆ 10 ಲಕ್ಷ ಅನುದಾನ ಬಂದಿರುವುದಾಗಿ ತಿಳಿಸಿದರು. ಕೃಷಿ ಇಲಾಖೆಯ ಅಧಿಕಾರಿ ನಾಗರಾಜ ನಾಯ್ಕ ಮಾಹಿತಿ ನೀಡಿ, ಪ್ರಸ್ತುತ ವರ್ಷ ಇಲ್ಲಿಯವರೆಗೆ ವಾಡಿಕೆಗಿಂದ ಸ್ವಲ್ಪ ಕಡಿಮೆ ಮಳೆಯಾದ ಕಾರಣ ಕೃಷಿ ಚಟುವಟಿಕೆಗಳು ನಿಧಾನವಾಗಿದೆ. ಅಂತೆಯೇ ವರ್ಷದಿಂದ ವರ್ಷಕ್ಕೆ ತಾಲೂಕಿನಲ್ಲಿ ಕಬ್ಬು ಬೆಳೆ ಅಧಿಕವಾಗುತ್ತಿದ್ದು ಈ ಬಾರಿ 350 ಹೆಕ್ಟರ್‌ನಷ್ಟು ಪ್ರದೇಶದಲ್ಲಿ ಹೆಚ್ಚುವರಿಯಾಗಿ ಕಬ್ಬು ಬೆಳೆಸಲಾಗುತ್ತಿದೆ. ಎಲ್ಲ ರೈತರಿಗೂ ಸಮರ್ಪಕವಾಗುವಷ್ಟು ಬಿತ್ತನೆ ಬೀಜಗಳು ಹಾಗೂ ಗೊಬ್ಬರಗಳು ದಾಸ್ತಾನು ಇದೆ ಎಂದರು. ಹೆಸ್ಕಾಂ ಅಧಿಕಾರಿ ರಮಾಕಾಂತ ಮಾತನಾಡಿ, ಬೆಳಕು ಯೋಜನೆಯಡಿ ಎರಡನೇ ಹಂತದ ಸರ್ವೇ ಮಾಡಲಾಗಿದ್ದು, ಒಪ್ಪಿಗೆಗಾಗಿ ಕಳುಹಿಸಲಾಗಿದೆ. ತಾಲೂಕಿನಲ್ಲಿ ಲೈನ್‌ಮೆನ್‌ಗಳ ಕೊರೆತೆಯಿದ್ದು, ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳುವ ಕುರಿತು ಚರ್ಚಿಸಲಾಗಿದೆ ಎಂದರು. ಪಶು ವೈದ್ಯಾಧಿಕಾರಿ ಸುಬ್ರಾಯ ಭಟ್ ಮಾಹಿತಿ ನೀಡಿ, ಪಶು ಸಂಜೀವಿನಿ ಯೋಜನೆಯಡಿ ತಾಲೂಕಿಗೆ 2 ಅಂಬುಲನ್ಸ್‌ಗಳನ್ನು ನೀಡಲಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಅದರಲ್ಲಿನ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಇದು ಈಗಿರುವ ಸಿಬ್ಬಂದಿ ಕೊರತೆಯನ್ನು ಕೊಂಚ ಮಟ್ಟಿಗೆ ತಗ್ಗಿಸಲಿವೆ. ಔಷಧಗಳು ಸಹ ಸಮರ್ಪಕವಾಗಿದ್ದು, ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಆರ್. ಹೆಗಡೆ ತಾಲೂಕಿನಲ್ಲಿ 158 ಶಿಕ್ಷಕರ ಹುದ್ದೆಗಳ ಖಾಲಿಯಿದ್ದು, 80 ಅಥಿತಿ ಶಿಕ್ಷಕರ ನೇಮಕಾತಿಯಿಂದ ಹೊಂದಾಣಿಕೆ ಮಾಡಲಾಗಿದೆ. ಈಗಾಗಲೇ 82% ಪ್ರತಿಶತದಷ್ಟು ಪುಸ್ತಕಗಳನ್ನು ನೀಡಲಾಗಿದ್ದು, ಕಲಿಕಾ ಚೇತರಿಕೆ ಎಂಬ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೆ ವಿಶೇಷವಾದ ಪುಸ್ತಕವನ್ನು ನೀಡಲಾಗುತ್ತಿದ್ದು. ಕಳೆದೆರೆಡು ವರ್ಷಗಳಲ್ಲಾದ ಕಲಿಕೆಯ ನಷ್ಟವನ್ನು ಪೂರೈಸಲು ಸಹಾಯಕವಾಗಲಿದೆ. ಬೀಳುವ ಹಂತದಲ್ಲಿದ್ದ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆಯಿಂದ ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕೆ 2 ಕೋಟಿ ಅನುದಾನ ಹಾಗೂ ತಾಟವಾಳ ಬಳಿ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು. ಮಾಹಿತಿಗಳನ್ನಾಧರಿಸಿ ಸಲಹೆ ಸೂಚನೆ ನೀಡಿ ಮಾತನಾಡಿದ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಕೆಲ ಪಂಚಾಯತಗಳಲ್ಲಿ ಈಗಲೂ ಉಳಿದಿರುವ ಹಳೆಯ ಮೀಟರ್‌ಗಳ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಲಾಗುತ್ತಿದ್ದು ಅವುಗಳು ಪಂಚಾಯತಕ್ಕೆ ಹೊರೆಯಾಗಿದೆ. ಅವುಗಳ ಬದಲಾವಣೆ ಹೆಸ್ಕಾಂ ನ ಹೊಣೆಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಾಕ್ಸ್ :ಅಡಿಕೆ ಬೆಳೆಗೆ ಹೆಜ್ಜೇನು ಹುಳುಗಳ ಪ್ರಾಮುಖ್ಯತೆ ಅಧಿಕವಾಗಿದೆ. ನೈಸರ್ಗಿಕ ಕಾರಣವಲ್ಲದೇ, ಎಳೆ ಅಡಿಕೆಗಳ ಉದುರುವಿಕೆಯಾದೊಡನೆ ಸಿಂಪಡಿಸುವ ರಾಸಾಯನಿಕಗಳಿಂದ ಜೇನುಗಳು ಸಾಯುತ್ತಿವೆ. ಅದು ಸಹಜವಾಗಿ ಅಡಿಕೆ ಇಳುವರಿ ಕಡಿಮೆಯಾಗಲು ಕಾರಣವಾಗುತ್ತಿದೆ. ವಾತಾವರಣದಲ್ಲಿ ಉಷ್ಣತೆ ಅಧಿಕವಾದೊಡನೆ ಎಳೆ ಅಡಿಕೆಗಳ ಉದುರವಿಕೆ ಸಹಜವಾಗಿದ್ದು, ಯಾವುದೇ ರಾಸಾಯನಿಕಗಳನ್ನು ಸಿಂಪಡಿಸುವ ಅವಶ್ಯಕತೆ ಇಲ್ಲ. ಇದರಿಂದ ಹೊಸ ಕೊನೆ ಒಡೆಯುವಿಕೆಗೆ ತೊಂದರೆಯಾಗುತ್ತದೆ. ಈ ಕುರಿತು ರೈತರು ಎಚ್ಚೆತ್ತುಕೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಸತೀಶ ಹೆಗಡೆ ತಿಳಿಸಿದರು.
Leave a Comment